ಉಡುಪಿ :ಜೂನ್ 08: ಕರಾವಳಿ ಭಾಗದಲ್ಲಿ ಬಿರುಸಿನ ಗಾಳಿ-ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ .
ಹೀಗಾಗಿ ಜೂ. 8ರಿಂದ 11ರ ವರೆಗೆ “ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.
ಕರಾವಳಿ ಭಾಗದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ದ.ಕ. ಜಿಲ್ಲೆಯಲ್ಲಿ ಹಲವು ಕಡೆಗಳಲ್ಲಿ ಶುಕ್ರವಾರ ಸಾಧಾರಣ ಮಳೆಯಾಗಿದೆ.ಮಂಗಳೂರು ನಗರದಲ್ಲಿ ಶುಕ್ರವಾರ ಬೆಳಗ್ಗೆ ಉತ್ತಮ ಮಳೆಯಾಗಿದೆ. ಮಧ್ಯಾಹ್ನವರೆಗೆ ಮಳೆ ಮುಂದುವರೆದಿತ್ತು. ಬಳಿಕ ಮೋಡ ಮತ್ತು ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಸುಳ್ಯದಲ್ಲಿ ಮಧ್ಯಾಹ್ನ ಬಳಿಕ ಧಾರಾಕಾರ ಮಳೆ ಸುರಿದಿದೆ. ಉಳ್ಳಾಲ, ಬಂಟ್ವಾಳ, ಸುಬ್ರಹ್ಮಣ್ಯ, ಬೆಳ್ತಂಗಡಿಯಲ್ಲಿ ಸಾಧಾರಣ ಮಳೆಯಾಗಿದೆ.
ಉಡುಪಿ ಜಿಲ್ಲೆಯ ಹಲವೆಡೆ ಶುಕ್ರವಾರ ಧಾರಾಕಾರ ಮಳೆ ಸುರಿದಿದೆ. ಕುಂದಾಪುರ, ಬೈಂದೂರು, ಹೆಬ್ರಿ ಭಾಗದಲ್ಲಿ ನಿರಂತರ ಮಳೆಯಾಗಿದ್ದು, ಹಲವೆಡೆ ಮನೆಗಳಿಗೆ ಹಾನಿ ಸಂಭವಿಸಿದೆ.
ಗುರುವಾರ ತಡರಾತ್ರಿ, ಶುಕ್ರವಾರ ಉಡುಪಿ, ಮಣಿಪಾಲ, ಮಲ್ಪೆ, ಕಾಪು, ಬ್ರಹ್ಮಾವರ ಸುತ್ತಮುತ್ತ ಬಿಟ್ಟುಬಿಟ್ಟು ಮಳೆಯಾಗಿದೆ. ಶುಕ್ರವಾರ ಮೋಡ ಕವಿದ ವಾತಾವರಣ ನಡುವೆ ಮಧ್ಯಾಹ್ನದಿಂದ ರಾತ್ರಿವರೆಗೂ ಕೆಲಕಾಲ ವ್ಯಾಪಕ ಮಳೆಯಾಗಿದೆ. ಕಾರ್ಕಳ ನಿಟ್ಟೆಯಲ್ಲಿ ಗುರುವಾರ ಸುಶೀಲಾ ಆಚಾರ್ತಿ ಅವರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿದೆ.
ಗಾಳಿ-ಮಳೆಯಿಂದಾಗಿ ಹಲವೆಡೆ ವಿದ್ಯುತ್ ಕಂಬ, ತಂತಿಗಳಿಗೆ ಹಾನಿ ಸಂಭವಿಸಿದೆ.