ಉಡುಪಿ: ಜೂನ್ 07:ಮಣಿಪಾಲದ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುವ ಸಲುವಾಗಿ ಅಪಾರ್ಟ್‌ಮೆಂಟ್ ವೊಂದರಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟ ಆರೋಪದ ಹಿನ್ನೆಲೆಯಲ್ಲಿ ಕೇರಳ ಮೂಲದ ವಿದ್ಯಾರ್ಥಿ ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಕೇರಳದ ತಿರುವನಂತಪುರ ಮೂಲದ ವಿದ್ಯಾರ್ಥಿ ಸಿದ್ದಾರ್ಥ್ (22 ವರ್ಷ) ಎಂಬಾತನೇ ಬಂಧಿತ ಆರೋಪಿ. ಉಡುಪಿ ತಾಲೂಕಿನ ಹೆರ್ಗ ಗ್ರಾಮದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಬಂಧಿಸಲಾಗಿದೆ. ಬಂಧಿತ ಆರೋಪಿಯಿಂದ 388 ಗ್ರಾಂ ಗಾಂಜಾ, 45 ಸಾವಿರ ರೂ. ಮೌಲ್ಯದ ಮೊಬೈಲ್ ಫೋನ್‌ನನ್ನು ಜಪ್ತಿ ಮಾಡಲಾಗಿದೆ.
ಜೂನ್ 5 ರಂದು ಸಂಜೆ 5 ಗಂಟೆಯ ಸುಮಾರಿಗೆ ಮಣಿಪಾಲ ಠಾಣಾ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ ನೇತೃತ್ವದಲ್ಲಿ ಪತ್ರಾಂಕಿತ ಅಧಿಕಾರಿ, ಉಡುಪಿ ತಾಲೂಕು ಅಸಿಸ್ಟೆಂಟ್ ಡ್ರಗ್ ಕಂಟ್ರೋಲರ್ ಶಂಕರ ಹಾಗೂ ಮಣಿಪಾಲ ಠಾಣಾ ಪೊಲೀಸ್ ಉಪನಿರೀಕ್ಷಕ ರಾಘವೇಂದ್ರ ಸಿ, ಎಎಸ್‌ಐ ವಿವೇಕಾನಂದ, ಎಎಸ್‌ಐ ಶೈಲೇಶ್ ಕುಮಾರ್ ಹಾಗೂ ಸಿಬ್ಬಂದಿಗಳಾದ ಸುಕುಮಾರ, ಅರುಣ ಕುಮಾರ್, ಚನ್ನೇಶ್, ಮಂಜುನಾಥ ಅವರನ್ನೊಳಗೊಂಡ ತಂಡ ಉಡುಪಿ ತಾಲೂಕು ಹೆರ್ಗಾ ಗ್ರಾಮದ ಅಪಾರ್ಟ್‌ಮೆಂಟ್ ಮೇಲೆ ದಾಳಿ ನಡೆಸಿತ್ತು.
ಈ ವೇಳೆಯಲ್ಲಿ ಆತ ಅಪಾರ್ಟ್‌ಮೆಂಟ್‌ನಲ್ಲಿ ಅಕ್ರಮವಾಗಿ ಗಾಂಜಾವನ್ನು ಶೇಖರಣೆ ಮಾಡಿಟ್ಟಿರುವುದು ಬೆಳಕಿಗೆ ಬಂದಿದೆ. ರೂಮ್‌ನಲ್ಲಿದ್ದ ಸಿದ್ದಾರ್ಥ ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈತ ಮಣಿಪಾಲದಲ್ಲಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡಿ ಲಾಭಗಳಿಸುವ ಉದ್ದೇಶದಿಂದ ಗಾಂಜಾವನ್ನು ಈ ವಿದ್ಯಾರ್ಥಿ ಶೇಖರಿಸಿ ಇಟ್ಟಿರುವುದು ತನಿಖೆಯಿಂದ ಕಂಡು ಬಂದಿದೆ ಎನ್ನಲಾಗಿದೆ.
ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಮಣಿಪಾಲ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.