ಕಾಪು:ಜೂನ್ 06:ಮೀನುಗಾರಿಕೆಗೆ ತೆರಳಿದ್ದ ವೇಳೆ ದೋಣಿಯಿಂದ ಹೊಳೆಗೆ ಬಿದ್ದು ಮೀನುಗಾರ ಮೃತಪಟ್ಟ ಘಟನೆ ಉದ್ಯಾವರ ಪಿತ್ರೋಡಿ ಪಾಪನಾಶಿನಿ ಹೊಳೆಯಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಉದ್ಯಾವರ ಪಿತ್ರೋಡಿ ನಿವಾಸಿ ಗೋವರ್ಧನ್ (62) ಮೃತ ವ್ಯಕ್ತಿ.ತನಿಶ್ರೀ ಹೆಸರಿನ ಸಾಂಪ್ರದಾಯಿಕ ನಾಡದೋಣಿಯಲ್ಲಿ ಲೀಲಾಧರ ಅವರೊಂದಿಗೆ ಸೇರಿಕೊಂಡು ಬುಧವಾರ ಬೆಳಗ್ಗೆ ಪಾಪನಾಶಿನಿ ಹೊಳೆಯಲ್ಲಿ ಮೀನುಗಾರಿಕೆಗೆ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.ನದಿಯಲ್ಲಿ ಕಂತು-ಬಲೆಯನ್ನು ಹೊಳೆಯ ನೀರಿಗೆ ಹಾಕಿ ಮೀನುಗಾರಿಕೆ ನಡೆಸುತ್ತಿದ್ದ ವೇಳೆ ರಭಸವಾದ ಗಾಳಿ, ಅಲೆಗಳ ಒತ್ತಡದಿಂದ ದೋಣಿ ಅಲುಗಾಡಿದಾಗ ಗೋವರ್ಧನ್ ನದಿಗೆ ಬಿದ್ದು ನೀರಿನಲ್ಲಿ ಮುಳುಗಿದ್ದರು.
ಸುಮಾರು ಅರ್ಧಗಂಟೆಯ ಬಳಿಕ ಅವರ ದೇಹ ಮೇಲಕ್ಕೆ ಬಂದಿದ್ದು ನೀರಿನಿಂದ ಮೇಲಕ್ಕೆ ಎತ್ತಿ ದೋಣಿಗೆ ಹಾಕಿ ದಡಕ್ಕೆ ತಂದು ಪರಿಶೀಲಿಸಿದಾಗ ಅವರು ಮೃತಪಟ್ಟಿರುವ ವಿಚಾರ ತಿಳಿದು ಬಂದಿತ್ತು.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.