ದಕ್ಷಿಣ ಕನ್ನಡ:ಜೂನ್ 03: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನ ಬಿತ್ತನೆಗೆ ಪೂರ್ವ ಸಿದ್ಧತೆಗಳು ಪ್ರಾರಂಭಗೊಂಡಿದ್ದು, ರೈತರಿಗೆ ಬಿತ್ತನೆ ಬೀಜ ಹಾಗೂ ರಸ ಗೊಬ್ಬರಗಳ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಜೂನ್ ಮೊದಲ ವಾರ ಬಿತ್ತನೆ ಪ್ರಾರಂಭವಾಗುವ ನೀರೀಕ್ಷೆಯಿದ್ದು, ಕರ್ನಾಟಕ ರಾಜ್ಯ ಬೀಜ ನಿಗಮದಿಂದ ಪ್ರಮಾಣಿತ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ಒದಗಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಕೆಂಪಕ್ಕಿ ತಳಿಯ ಭತ್ತದ ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದ್ದು, ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಲಭ್ಯವಿರುವ ಕೆಂಪಕ್ಕಿ ತಳಿಗಳಾದ ಜಯ (140-150 ದಿನಗಳು) 60.5 ಕ್ವಿಂ., ಜ್ಯೋತಿ (115-120 ದಿನಗಳು) 65.5 ಕ್ವಿಂ., ಎಂಒ-4 (130-135 ದಿನಗಳು) 198 ಕ್ವಿಂ. ಮತ್ತು ಸಹ್ಯಾದ್ರಿ ಕೆಂಪುಮುಖೀ¤ (120-125 ದಿನಗಳು) 180 ಕ್ವಿಂ. ಬಿತ್ತನೆ ಬೀಜಕ್ಕೆ ಈಗಾಗಲೇ ಬೇಡಿಕೆ ಸಲ್ಲಿಸಿ ಹಂತಹಂತವಾಗಿ ದಾಸ್ತಾನಿರಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ ಎಂಒ-4 ತಳಿಯೊಂದಿಗೆ ಇತರ ಪರ್ಯಾಯ ಕೆಂಪಕ್ಕಿ ತಳಿಗಳಾದ ಜಯ, ಜ್ಯೋತಿ, ಸಹ್ಯಾದ್ರಿ ಕೆಂಪುಮುಖೀ ತಳಿಗಳ ಬಿತ್ತನೆ ಬೀಜಗಳ ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ.
ರೈತ ಸಂಪರ್ಕ ಕೇಂದ್ರದಲ್ಲಿ ಎಂಒ-4. 112 ಕ್ವಿಂ., ಸಹ್ಯಾದ್ರಿ ಕೆಂಪುಮುಖೀ¤ – 80 ಕ್ವಿಂ., ಜಯ – 28.25 ಕ್ವಿಂ., ಜ್ಯೋತಿ 26 ಕ್ವಿಂ. ದಾಸ್ತಾನಿದ್ದು, ರೈತರು ರೈತ ಸಂಪರ್ಕ ಕೇಂದ್ರಗಳಿಂದ ಬಿತ್ತನೆ ಬೀಜ ಪಡೆಯುವಾಗ ವಿವಿಧ ತಳಿಯ ಭತ್ತದ ಅವಧಿ, ಬೇಸಾಯ ಕ್ರಮಗಳು ಹಾಗೂ ಸಸ್ಯ ಸಂರಕ್ಷಣೆ ವಿಧಾನಗಳ ಮಾಹಿತಿ ಪಡೆದು ಆಯಾ ಕಾಲಕ್ಕನುಗುಣವಾಗಿ ಬಿತ್ತನೆಗೆ ಉಪಯೋಗಿಸಬೇಕು. ಕರಾವಳಿಯಲ್ಲಿ ಜ್ಯೋತಿ ತಳಿಗೆ ಪರ್ಯಾಯವಾದ ಕೆಂಪಕ್ಕಿ ಸಹ್ಯಾದ್ರಿ ಕೆಂಪುಮುಖೀ ಯನ್ನು ಬಿತ್ತನೆಗೆ ಪರಿಚಯಿಸಲಾಗುತ್ತಿದೆ.
ದ.ಕ.ದಲ್ಲಿ ಮುಂಗಾರು ಹಂಗಾಮಿನ ಮೇ ಅಂತ್ಯದ ವರೆಗಿನ ರಸಗೊಬ್ಬರದ ಬೇಡಿಕೆ 6,772 ಟನ್‌ಗಳಷ್ಟಿದ್ದು ದಾಸಾನು ಸೇರಿದಂತೆ ಜಿಲ್ಲೆಯ ವಿವಿಧ ಸಹಕಾರಿ ಹಾಗೂ ಖಾಸಗಿ ಮಾರಾಟ ಮಳಿಗೆಗಳಲ್ಲಿ 14,608 ಟನ್ ರಸಗೊಬ್ಬರ ಲಭ್ಯವಿದೆ ಎಂದು ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.