ಉಡುಪಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಆನ್‌ಲೈನ್ ಮೂಲಕ ಮಹಿಳೆಯೊಬ್ಬರಿಗೆ ಸಾವಿರಾರು ರೂ. ವಂಚಿಸಿದ ಘಟನೆ ನಡೆದಿದೆ.
ಉಡುಪಿಯ ಪುಷ್ಪಾ ಅವರು ವಿದೇಶದಲ್ಲಿ ಉದ್ಯೋಗ ಪಡೆಯಲು ನೌಕರಿ.ಕಾಂನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ್ದರು. ಅನಂತರ ಅವರ ಮೊಬೈಲ್‌ಗೆ ಬಂದ ಈ-ಮೇಲ್ ಸಂದೇಶದಲ್ಲಿ ಸೂಚಿಸಿದ ಸಂಖ್ಯೆಗೆ ಕರೆ ಮಾಡಿದಾಗ ಆ ವ್ಯಕ್ತಿ ವಿದೇಶದಲ್ಲಿ ಉದ್ಯೋಗ ಕೊಡುವುದಾಗಿ ನಂಬಿಸಿ ವೀಸಾ ಪ್ರಕ್ರಿಯೆ, ಮೆಡಿಕಲ್ ಫಿಟ್ನೆಸ್ ಬಗ್ಗೆ ತಿಳಿಸಿದ್ದಾರೆ.
ಅದರಂತೆ ಪುಷ್ಪಾ ಅವರು ಆರೋಪಿಗಳು ಕಳುಹಿಸಿದ ಕ್ಯೂ ಆರ್ ಕೋಡ್ ಗಳನ್ನು ಸ್ಕ್ಯಾನ್ ಮಾಡಿ ಗೂಗಲ್ ಪೇ ಮೂಲಕ ಹಂತ ಹಂತವಾಗಿ 80,070 ರೂ.ಗಳನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದಾರೆ. ಆದರೆ ಆರೋಪಿಗಳು ವಿದೇಶದಲ್ಲಿ ಉದ್ಯೋಗ ನೀಡದೇ ಪಡೆದ ಹಣವನ್ನು ಹಿಂದಿರುಗಿಸದೇ ವಂಚಿಸಿ ನಷ್ಟ ಉಂಟು ಮಾಡಿದ್ದಾರೆ. ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.