ಉಡುಪಿ : ಮೇ 30 :ಪರ್ಯಾಯ ಶ್ರೀಕೃಷ್ಣ ಪೂಜಾ ದೀಕ್ಷಿತರಾದ ಪರಮ ಪೂಜ್ಯ ಪುತ್ತಿಗೆ ಶ್ರೀಪಾದರ ಸಂಕಲ್ಪದಂತೆ ಭಾರತೀಯ ಸನಾತನ ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವರ್ಧನೆಯ ಸದುದ್ದೇಶದಿಂದ ಪ್ರಾರಂಭಗೊಂಡ ಸನಾತನ ಗುರುಕುಲ ಪದ್ದತಿಯಂತೆ ಇದ್ದು ವೈದಿಕ ಶಿಕ್ಷಣ ದ ಜೊತೆಗೆ ಲೌಕಿಕ ಶಿಕ್ಷಣವನ್ನು ನೀಡುವ ಶ್ರೀ ಸುಗುಣ ಸ್ಕೂಲ್ ಪಾಡಿಗಾರಿನ ಪ್ರಶಾಂತ ವಾತಾವರಣದಲ್ಲಿ ಕಾರ್ಯಾರಂಭ ಗೊಂಡಿದೆ.
ನಿನ್ನೆ ಸರ್ವಜ್ಞ ಪೀಠ ದಿಂದ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸುವ ಮೂಲಕ ಪೂಜ್ಯ ಪರ್ಯಾಯ ಶ್ರೀಪಾದರು ಕಿರಿಯ ಶ್ರೀಪಾದರೊಂದಿಗೆ ಶಿಕ್ಷಣಾರಂಭಕ್ಕೆ ಚಾಲನೆ ನೀಡಿದ್ದರೆ ಇಂದು ಮುಂಜಾವಿನ ಶುಭ ಘಳಿಗೆಯಲ್ಲಿ ವೇದಮಂತ್ರಗಳ ಪಠಣ ಗಳೊಂದಿಗೆ ಪುಟ್ಟ ಪುಟಾಣಿಗಳಿಂದ ಗೋ ಪ್ರದಕ್ಷಿಣೆ ಮಾಡಿಸುವ ಮೂಲಕ ತರಗತಿಯ ಕೊಠಡಿಗಳಲ್ಲಿ ಜ್ಞಾನ ದೀಪಗಳನ್ನು ಬೆಳಗಿಸುವ ಮೂಲಕ ತರಗತಿಗಳನ್ನು ಗುರುಕುಲ ಪದ್ದತಿಯಂತೆ ಪ್ರಾರಂಭಿಸಲಾಯಿತು
ಆರಂಭದಲ್ಲಿ ದೀಪ ಬೆಳಗಿಸಿದ ಖ್ಯಾತ ವಿದ್ವಾನ್ ಡಾ ಉಡುಪಿ ರಾಮನಾಥಾಚಾರ್ಯರು ಗುರು ಮಹಿಮೆಯನ್ನು ತಿಳಿಸುತ್ತ , ಹಲವು ಪ್ರಾತ್ಯಕ್ಷಿಕೆಗಳನ್ನು ಮಾಡುವ ಮೂಲಕ ಪ್ರಾಚೀನ ವಿಜ್ಞಾನದ ಆಯಾಮಗಳನ್ನು ಮಕ್ಕಳಿಗೆ ತಿಳಿಯುವಂತೆ ತಿಳಿಯಾಗಿ ತಿಳಿಸಿದರು .
ಖ್ಯಾತ ಶಿಕ್ಷಣ ತಜ್ಞ ಶ್ರೀ ರೋಹಿತ್ ಚಕ್ರತೀರ್ಥ ರವರು ಮಾತನಾಡುತ್ತ ಸನಾತನ ಶಿಕ್ಷಣ ದ ಮಹತ್ವವನ್ನು ವಿವರಿಸಿ ಮಕ್ಕಳಲ್ಲಿ ಉತ್ಸಾಹವನ್ನು ತುಂಬಿಸಿದರು.
ಶ್ರೀಮಠದ ಸಾಗರೋತ್ತರ ಶಾಖೆಗಳ ಕಾರ್ಯದರ್ಶಿ ಶ್ರೀ ಪ್ರಸನ್ನಾಚಾರ್ಯ ಮಾತನಾಡಿ ಉಪನಿಷತ್ತಿನ ಬರುವ ಗುರು ಶಿಷ್ಯ ಸಂವಾದ , ವಿದ್ಯಾರ್ಜನೆಯಲ್ಲಿ ವಿನಯದ ಪಾತ್ರ ಗಳನ್ನು ಬೋಧಿಸಿ ಪೂಜ್ಯ ಶ್ರೀಪಾದರ ಕಾಳಜಿಯನ್ನು ವಿವರಿಸಿ ಸಹಕಾರವನ್ನು ಕೋರಿದರು.
ಶಾಲೆಯ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಮೋದ್ ಸಾಗರ್ ಮಾತನಾಡಿ ಶಾಲೆಯ ಬೋಧನಾ ಕ್ರಮಗಳನ್ನು ವಿವರಿಸುತ್ತ ಪೋಷಕರ ಸಹಕಾರವನ್ನು ಕೋರಿದರು .
ಗುರುಕುಲದ ಪ್ರಾಂಶುಪಾಲರಾದ ಪಾಡಿಗಾರು ಶ್ರೀಪತಿ ಆಚಾರ್ಯ ಸ್ವಾಗತಿಸಿ ಧನ್ಯವಾದವಿತ್ತರು.