ನವದೆಹಲಿ:ಮೇ 29:ಲೋಕಸಭೆ ಚುನಾವಣೆ ಅಂತಿಮ ಘಟ್ಟ ಸಮೀಪಿಸುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಮೇ 30 ರಿಂದ ಜೂನ್ 1 ರವರೆಗೆ ತಮಿಳುನಾಡಿನ ಕನ್ಯಾಕುಮಾರಿಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಧ್ಯಾನ ಮಾಡಲಿದ್ದಾರೆ. 2019ರ ಲೋಕಸಭಾ ಚುನಾವಣೆ ವೇಳೆ ಅವರು ಇದೇ ರೀತಿ ಕೇದಾರನಾಥ ದೇಗುಲಕ್ಕೆ ಭೇಟಿ ನೀಡಿದ್ದರು. ಈ ವೇಳೆ ಕೆಲವು ಗಂಟೆಗಳ ಕಾಲ ಅಲ್ಲಿಯೇ ಧ್ಯಾನಕ್ಕೆ ಕುಳಿತಿದ್ದರು. ಅದರಂತೆ ಈ ಬಾರಿ ಅವರು ತಮಿಳುನಾಡಿನ ಕನ್ಯಾಕುಮಾರಿಯಲ್ಲಿರುವ ಸ್ವಾಮಿ ವಿವೇಕಾನಂದ ರಾಕ್ ಸ್ಮಾರಕದಲ್ಲಿ ಧ್ಯಾನ ಮಾಡಲಿದ್ದಾರೆ. ಮೇ 30ರ ಸಂಜೆಯಿಂದ ಜೂನ್ 1 ರ ಸಂಜೆಯವರೆಗೆ ಎರಡು ದಿನಗಳ ಕಾಲ ಧ್ಯಾನದಲ್ಲಿ ತೊಡಗಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.
ಗುಹೆಯಲ್ಲಿ ಧ್ಯಾನ:2019ರ ಲೋಕಸಭೆ ಚುನಾವಣೆ ವೇಳೆ ಪ್ರಧಾನಿ ಮೋದಿ ಕೇದಾರನಾಥ ಗುಹೆಯಲ್ಲಿ ಧ್ಯಾನ ಮಾಡಿ ಇಡೀ ರಾಷ್ಟ್ರದ ಗಮನ ಸೆಳೆದಿದ್ದರು. ಈ ಹಿಂದೆ 2014ರ ಚುನಾವಣೆ ವೇಳೆ ಮೋದಿ ಶಿವಾಜಿ ಪ್ರತಾಪಗಢಕ್ಕೆ ಭೇಟಿ ನೀಡಿದ್ದರು. ದೇಶದ 543 ಲೋಕಸಭಾ ಸ್ಥಾನಗಳಿಗೆ ಏಪ್ರಿಲ್ 19 ರಂದು ಪ್ರಾರಂಭವಾದ ಚುನಾವಣಾ ಪ್ರಕ್ರಿಯೆಯು ಜೂನ್ 1 ರಂದು ಅಂತಿಮ ಹಂತದ ಮತದಾನದೊಂದಿಗೆ ಕೊನೆಗೊಳ್ಳಲಿದೆ. ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.