ಕಾಪು: ಮೇ 29:ಕಾಪು ಸಮೀಪ ಕೊಪ್ಪಲಂಗಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಬದಿಯ ಮೋರಿಗೆ ಢಿಕ್ಕಿ ಹೊಡೆದು, ಪಲ್ಟಿಯಾಗಿ ನಾಲ್ಕು ಮಂದಿ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಂಗಳವಾರ ಮುಂಜಾನೆ ನಡೆದಿದೆ.
ಉಡುಪಿ ಕಡೆಯಿಂದ ಮಂಗಳೂರು ಏರ್‌ಪೋರ್ಟ್‌ಗೆ ತೆರಳುತ್ತಿದ್ದ ಧ್ರುವ್ ಯಾದವ್, ಸಿದ್ಧಾರ್ಥ್ ಶೆಟ್ಟಿ, ಕೃಷ್ ಅನ್ಸಾರಿ, ಮಹಮ್ಮದ್ ಉಜೈರ್ ಖುರೇಷಿ ಗಾಯಗೊಂಡವರಾಗಿದ್ದು, ಗಾಯಾಳುಗಳ ಪೈಕಿ ಧ್ರುವ್ ಯಾದವ್ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.
ಕೊಪ್ಪಲಂಗಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಹೆದ್ದಾರಿ ಬದಿಯ ಮೋರಿ, ಅದರ ಪಕ್ಕದ ಕಲ್ಲು ಬಂಡೆಗೆ ಢಿಕ್ಕಿ ಹೊಡೆದಿದ್ದು ಬಳಿಕ ರಸ್ತೆಯಲ್ಲಿ ಪಲ್ಟಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ನಾಲ್ಕು ಮಂದಿಯೂ ರಸ್ತೆಯಲ್ಲಿ ಅಲ್ಲಲ್ಲಿ ಬಿದ್ದಿದ್ದರು. ಸ್ಥಳೀಯರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದರು.
ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.