ಮಣಿಪಾಲ, 27 ಮೇ 2024: – ಕಸ್ತೂರ್ಬಾ ವೈದ್ಯಕೀಯ ಕಾಲೇಜು (ಕೆಎಂಸಿ) ಮತ್ತು ಆಸ್ಪತ್ರೆಯ ವೈದ್ಯಕೀಯ ತಳಿಶಾಸ್ತ್ರ (ಮೆಡಿಕಲ್ ಜೆನೆಟಿಕ್ಸ್ ) ವಿಭಾಗದಿಂದ ತಳಿಶಾಸ್ತ್ರವನ್ನು ವಿಸ್ತ್ರತವಾಗಿ ಪರಿಚಯಿಸುವ ಉದ್ದೇಶದಿಂದ ಯಶಸ್ವಿ ಅರ್ಧ ದಿನದ ಓಪನ್ ಡೇ ಕಾರ್ಯಕ್ರಮವನ್ನು ಆಯೋಜಿಸಿತ್ತು . ಕಾರ್ಯಕ್ರಮದಲ್ಲಿ ಎಲ್ಲಾ ವಯಸ್ಸಿನವರು ಪಾಲ್ಗೊಂಡು ಕಲಿಕಾ ಸಂವಾದ ನಡೆಸಿದರು . ಭಾಗವಹಿಸಿದವರಿಗೆ ವಿವಿಧ ಸಂವಾದಾತ್ಮಕ ಆಟಗಳು ಮತ್ತು ರಸಪ್ರಶ್ನೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಹೆ ಮಣಿಪಾಲದ ಸಹ ಕುಲಪತಿ (ಆರೋಗ್ಯ ವಿಜ್ಞಾನಗಳು) ಡಾ. ಶರತ್ ಕೆ ರಾವ್ ಅವರು, ಹೊಸ ತಂತ್ರಜ್ಞಾನಗಳು ಮತ್ತು ಸಂಶೋಧನೆಯಿಂದ ವೈದ್ಯಕೀಯ ಕ್ಷೇತ್ರದಲ್ಲಿ ತ್ವರಿತ ಪ್ರಗತಿ ಕಾಣುತ್ತಿದೆ . ಮೂಲ ವಿಜ್ಞಾನ, ಸಂಶೋಧನೆ ಮತ್ತು ವೈದ್ಯಕೀಯ ಸೇವೆಗಳನ್ನು ಸಂಪರ್ಕಿಸುವ ಸೇತುವೆಯಾಗಿ ತಳಿಶಾಸ್ತ್ರ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಮೊದಲು ಹೈದರಾಬಾದ್‌ನ ಡಿಎನ್‌ಎ ಫಿಂಗರ್‌ಪ್ರಿಂಟಿಂಗ್ ಮತ್ತು ಡಯಾಗ್ನೋಸ್ಟಿಕ್ಸ್ ಸೆಂಟರ್‌ನಲ್ಲಿ ಡಯಾಗ್ನೋಸ್ಟಿಕ್ ವಿಭಾಗದ ಮುಖ್ಯಸ್ಥರಾದ ಡಾ. ಅಶ್ವಿನ್ ದಲಾಲ್ ಅವರು “ಎ ಟಿ ಜಿ ಎಸ್ : ಕ್ರ್ಯಾಕಿಂಗ್ ದಿ ಜೆನೆಟಿಕ್ ಕೋಡ್ ಆಫ್ ಹ್ಯೂಮನ್ ಜೀನೋಮ್” ಎಂಬ ವಿಷಯದಲ್ಲಿ ಭಾಷಣ ಮಾಡಿದರು. ನಂತರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಡಾ. ದಲಾಲ್ ಅವರು ಮಾನವ ಜೀನೋಮ್‌ನ ಜಟಿಲತೆಗಳು ಮತ್ತು ಜೆನೆಟಿಕ್ ಸಂಶೋಧನೆಯಲ್ಲಿನ ಪ್ರಗತಿಗಳ ಬಗ್ಗೆ ಬೆಳಕು ಚೆಲ್ಲಿದರು . ಅವರು ಮಾತನಾಡುತ್ತಾ , “ಕೆಎಂಸಿಯ ವೈದ್ಯಕೀಯ ಜೆನೆಟಿಕ್ಸ್ ವಿಭಾಗವು ಅಪರೂಪದ ಅನುವಂಶಿಕ ಪರಿಸ್ಥಿತಿಗಳಿಂದ ಪೀಡಿತ ರೋಗಿಗಳಿಗೆ ಮತ್ತು ಕುಟುಂಬಗಳಿಗೆ ಸಮಗ್ರ ಸೇವೆಗಳನ್ನು ನೀಡಲು ಮೀಸಲಾಗಿರುವ ಭಾರತದ ಕೆಲವೇ ಕೇಂದ್ರಗಳಲ್ಲಿ ಒಂದಾಗಿದೆ. ಅದರ ಕ್ಲಿನಿಕಲ್ ಸೇವೆಗಳ ಹೊರತಾಗಿ, ಪ್ರವರ್ತಕ ಸಂಶೋಧನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ ಮತ್ತು ವೈದ್ಯಕೀಯ ತಳಿಶಾಸ್ತ್ರ ಕ್ಷೇತ್ರಕ್ಕೆ ಗಣನೀಯವಾಗಿ ಕೊಡುಗೆ ನೀಡುತ್ತಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕೆಎಂಸಿ ಮಣಿಪಾಲದ ಡೀನ್ ಡಾ.ಪದ್ಮರಾಜ್ ಹೆಗ್ಡೆ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ, ಕೆಎಂಸಿ ಮಣಿಪಾಲದ ಸಹ ಡೀನ್ ಡಾ.ನವೀನ್ ಎಸ್ ಸಾಲಿನ್ಸ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ವೈದ್ಯಕೀಯ ತಳಿಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಅಂಜು ಶುಕ್ಲಾ, ಅವರು ಓಪನ್ ಡೇ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅನೇಕ ಮಕ್ಕಳು/ವಿದ್ಯಾರ್ಥಿಗಳು ತಮ್ಮ ಪೋಷಕರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಂವಾದಾತ್ಮಕ ಆಟಗಳು ಮತ್ತು ರಸಪ್ರಶ್ನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡರು . ಅದು ಆನಂದದಾಯಕ ಕಲಿಕೆಯ ಅನುಭವವನ್ನು ನೀಡಿತು.