ನವದೆಹಲಿ:ಮೇ 26:ಪೂರ್ವ ದೆಹಲಿಯ ವಿವೇಕ್ ವಿಹಾರ್ ಪ್ರದೇಶದ ಮಕ್ಕಳ ಆಸ್ಪತ್ರೆಯಲ್ಲಿ ನಿನ್ನೆ ಶನಿವಾರ ತಡರಾತ್ರಿ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಕನಿಷ್ಠ ಏಳು ನವಜಾತ ಶಿಶುಗಳು ಮೃತಪಟ್ಟಿವೆ.
ಅಗ್ನಿ ಅವಘಡ ಸಂಭವಿಸಿದ ವೇಳೆ 12 ಮಕ್ಕಳನ್ನು ರಕ್ಷಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಅದರಲ್ಲಿ ಏಳು ಮಂದಿ ಮೃತಪಟ್ಟಿದ್ದಾರೆ. ಒಂದು ನವಜಾತ ಶಿಶು ವೆಂಟಿಲೇಟರ್ ನಲ್ಲಿದೆ, ಐದು ಶಿಶುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಗ್ನಿಶಾಮಕ ಅಧಿಕಾರಿಯ ಪ್ರಕಾರ, ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. ರಕ್ಷಿಸಲ್ಪಟ್ಟ ನವಜಾತ ಶಿಶುಗಳನ್ನು ಪೂರ್ವ ದೆಹಲಿಯ ಅಡ್ವಾನ್ಸ್ ಎನ್ಐಸಿಯು ಆಸ್ಪತ್ರೆಗೆ ಕರೆದೊಯ್ದಿ ಚಿಕಿತ್ಸೆ ನೀಡಲಾಗುತ್ತಿದೆ.ದೆಹಲಿ ಅಗ್ನಿಶಾಮಕ ಸೇವೆಗೆ ಕಳೆದ ರಾತ್ರಿ 11.32 ಕ್ಕೆ ಕರೆ ಬಂದಿದ್ದು, 9 ಅಗ್ನಿಶಾಮಕ ಟೆಂಡರ್‌ಗಳು ಕೂಡಲೇ ಸ್ಥಳಕ್ಕೆ ಧಾವಿಸಿದವು.
ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಡಿಎಫ್‌ಎಸ್ ಮುಖ್ಯಸ್ಥ ಅತುಲ್ ಗಾರ್ಗ್ ತಿಳಿಸಿದ್ದಾರೆ. ವಿವೇಕ್ ವಿಹಾರ್ ಪ್ರದೇಶದ ಐಟಿಐ, ಬ್ಲಾಕ್ ಬಿ ಬಳಿ ಇರುವ ಬೇಬಿ ಕೇರ್ ಸೆಂಟರ್‌ನಿಂದ ಅಗ್ನಿಶಾಮಕ ಕರೆ ಬಂತು. ಒಟ್ಟು ಒಂಬತ್ತು ಅಗ್ನಿಶಾಮಕ ಟೆಂಡರ್‌ಗಳನ್ನು ರವಾನಿಸಲಾಯಿತು ಎಂದು ಹೇಳಿದ್ದಾರೆ.
ಅಗ್ನಿಶಾಮಕ ಅಧಿಕಾರಿ ರಾಜೇಶ್, ರಾತ್ರಿ 11:32 ಕ್ಕೆ, ಅಗ್ನಿಶಾಮಕ ಸೇವಾ ನಿಯಂತ್ರಣ ಕೊಠಡಿಗೆ ಆಸ್ಪತ್ರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಹಿತಿ ಬಂತು. ಒಟ್ಟು 16 ಅಗ್ನಿಶಾಮಕ ಟೆಂಡರ್‌ಗಳು ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲಾಗಿದೆ. 2 ಕಟ್ಟಡಗಳು ಬೆಂಕಿಗೆ ಆಹುತಿಯಾಗಿವೆ. , ಒಂದು ಆಸ್ಪತ್ರೆಯ ಕಟ್ಟಡ ಮತ್ತು ಬಲಭಾಗದಲ್ಲಿರುವ ವಸತಿ ಕಟ್ಟಡದ 2 ಮಹಡಿಗಳು ಬೆಂಕಿಗೆ ಆಹುತಿಯಾಗಿವೆ.11–12 ಶಿಶುಗಳನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.