ಕಾರ್ಕಳ:ಮೇ 18:ನಕಲಿ ಪರಶುರಾಮನ ಪ್ರತಿಮೆ ಸ್ಥಾಪಿಸಿ ತುಳುನಾಡಿನ ಸೃಷ್ಟಿಕರ್ತ ಪರಶುರಾಮ ಹಾಗೂ ಹಿಂದೂ ಧಾರ್ಮಿಕ ಭಾವನೆಗಳಿಗೆ ಕಾರ್ಕಳ ಶಾಸಕರು ಅವಮಾನ ಮಾಡಿದ್ದಾರೆ. ಪ್ರತಿಮೆ ನೈಜತೆ ಕುರಿತು ಬೈಲೂರಿನ ಮಾರಿಗುಡಿ ಎದುರು ಪ್ರಮಾಣ ಮಾಡಲು ಸಿದ್ಧರಿದ್ದೀರಾ ಎಂದು ನ್ಯಾಯವಾದಿ ಸುಧೀರ್ ಮರೋಳಿ ಸುನಿಲ್ ಕುಮಾರ್ ಅವರಿಗೆ ಸವಾಲೆಸೆದರು.
ಅವರು ಮೇ 18 ರಂದು ಶನಿವಾರ ಕಾರ್ಕಳ ತಾಲೂಕಿನ ಬೈಲೂರಿನಲ್ಲಿ ಪರಶುರಾಮ ಥೀಮ್ ಪಾರ್ಕ್ ಹಿತರಕ್ಷಣಾ ಸಮಿತಿ ವತಿಯಿಂದ ಪರಶುರಾಮನ ನೈಜ ಕಂಚಿನ ಪ್ರತಿಮೆ ನಿರ್ಮಾಣಕ್ಕಾಗಿ ಸಂಕಲ್ಪ ಸಭೆಯನ್ನುದ್ದೇಶಿಸಿ ಮಾತನಾಡಿ, ಕಾರ್ಕಳ ಶಾಸಕರು ಕಾರ್ಕಳದ ಜನರನ್ನು ವಂಚಿಸಿದ ರೀತಿಯಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರನ್ನು ವಂಚಿಸುತ್ತಿದ್ದಾರೆ. ಬಿಜೆಪಿ ಕಾರ್ಯಕರ್ತರು ತಪ್ಪಿತಸ್ಥರಲ್ಲ ಅದರೆ ಅವರು ತಪ್ಪಿತಸ್ಥರ ಗುಂಪಿನಲ್ಲಿದ್ದಾರೆ ಎಂದು ಸುಧೀರ್ ಮರೋಳಿ ಹೇಳಿದರು.ಪರಶುರಾಮ ಥೀಮ್ ಪಾರ್ಕ್ ಯೋಜನೆಗೆ ಕಾಂಗ್ರೆಸ್ ಅಡ್ಡಗಾಲು ಹಾಕುತ್ತಿದೆ ಎನ್ನುವ ಶಾಸಕರೇ ನಿಮ್ಮದೇ ಸರ್ಕಾರದ ಅವಧಿಯಲ್ಲಿ ಅನುದಾನ ಮಂಜೂರುಗೊಳಿಸಿ ಕಾಮಗಾರಿ ಪೂರ್ಣಗೊಳಿಸಿ ಮುಖ್ಯಮಂತ್ರಿಯವರಿಂದ ಉದ್ಘಾಟನೆ ಮಾಡಿಸಿದ್ದಿರಲ್ಲವೇ? ಈಗ ಈ ಯೋಜನೆಗೆ ಕಾಂಗ್ರೆಸ್ ಅಡ್ಡಗಾಲು ಹಾಕಿದೆ ಎನ್ನುವ ಸುಳ್ಳು ಆರೋಪ ಯಾಕೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಪರಶುರಾಮ ಥೀಮ್ ಪಾರ್ಕಿಗೆ ಭೂಮಿ ಮಂಜೂರಾತಿ ಕುರಿತು ಸಚಿವರು ಸಲ್ಲಿಸಿದ ಪ್ರಸ್ತಾವನೆ ಅವರದೇ ಸರ್ಕಾರದಿಂದ ತಿರಸ್ಕಾರವಾದರೂ ಕಾನೂನು ಉಲ್ಲಂಘಿಸಿ ನಕಲಿ ಪರಶುರಾಮನ ಪ್ರತಿಮೆ ನಿರ್ಮಿಸಿ ಪರಶುರಾಮನಿಗೆ ದ್ರೋಹ ಮಾಡಿದ್ದೀರಿ ಎಂದು ವಾಗ್ದಾಳಿ ನಡೆಸಿದರು. ಇದಲ್ಲದೇ ಈ ಯೋಜನೆಗೆ ಭೂಮಿ ಮಂಜೂರಾತಿ ಸಾಧ್ಯವಿಲ್ಲ ಎನ್ನುವ ಸರ್ಕಾರದ ಆದೇಶದ ವಿರುದ್ಧ ಸಕ್ಷಮ ಪ್ರಾಧಿಕಾರ ಅಥವಾ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಬೇಕಿತ್ತು. ಇದನ್ನೂ ಮಾಡದೇ ಈಗ ಕಾಂಗ್ರೆಸ್ ಮೇಲೆ ಆರೋಪ ಹೊರಿಸುವ ನಿಮಗೆ ಕೇವಲ ರಾಜಕೀಯ ಲಾಭಕ್ಕಾಗಿ ಮಾತ್ರ ಪರಶುರಾಮ ಥೀಮ್ ಪಾರ್ಕ್ ಬೇಕಿತ್ತೇ ಹೊರತಾಗಿ ಬೇರೆ ಯಾವ ಉದ್ದೇಶವೂ ಇರಲಿಲ್ಲ ಎಂದು ಮರೋಳಿ ಆರೋಪಿಸಿದರು.
ಅವರಿಗೆ ನೈತಿಕತೆ ಇದ್ದರೆ ಜನ್ಮ ನೀಡಿದ ತಂದೆ ತಾಯಿ ಪಾದಮುಟ್ಟಿ ಈ ಪ್ರತಿಮೆ ಕಂಚಿನದ್ದು ಎಂದು ಹೇಳಲು ಸಿದ್ದರೇ ಎಂದು ಸವಾಲು ಎಸೆದರು. ಪ್ರತಿಮೆ ವಿಚಾರ ಸದನದಲ್ಲಿ ಚರ್ಚೆಯಾದಾಗ ಬಿಜೆಪಿಯ ಯಾವ ಶಾಸಕರು ಕೂಡ ಸುನಿಲ್ ಕುಮಾರ್ ಪರವಾಗಿ ಯಾಕೆ ನಿಂತಿಲ್ಲ ಎನ್ನುವುದು ಸ್ಪಷ್ಟವಾಗಿದೆ. ದುರಂಹಕಾರಿ ಶಾಸಕರು ಧಾರ್ಮಿಕ ಭಾವನೆಗಳನ್ನು ದುರುಪಯೋಗಪಡಿಸಿಕೊಂಡು ಶಂಖ,ಜಾಗಟೆ, ತಾಳಗಳ ಸಹಿತ ಭಜನೆಗಳನ್ನು ಅಪಹಾಸ್ಯ ಮಾಡಿರುವವರಿಗೆ ಕ್ಷಮೆಯಿಲ್ಲ ಎಂದರು.
ಪ್ರತಿಮೆಯ ನೈಜತೆ ಪರಿಶೀಲನೆಗೆ ಪ್ರತಿಮೆಗೆ ಸುತ್ತಿಗೆಯಲ್ಲಿ ಹೊಡೆಯುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಧಾರ್ಮಿಕತೆಗೆ ಸುತ್ತಿಗೆಯಿಂದ ಹೊಡೆದಂತಾಗಿದೆ ಮಾತ್ರವಲ್ಲದೇ ಸುತ್ತಿಗೆಯಿಂದ ಹೊಡೆದವರು ಸಂಸ್ಕೃತಿ ಭಂಜಕರು ಹಾಗೂ ಧರ್ಮದ್ರೋಹಿಗಳು ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮಾತನಾಡಿ,ಪರಶುರಾಮ ಥೀಮ್ ಪಾರ್ಕ್ ಮೋಜುಮಸ್ತಿಯ ತಾಣವಾಗಬಾರದು ಅದು ಧಾರ್ಮಿಕ ಶ್ರದ್ಧಾಕೇಂದ್ರವಾಗಬೇಕು. ಬೈಲೂರಿನ ಕ್ಷೇತ್ರದಲ್ಲಿ ಸುನಿಲ್ ಕುಮಾರ್ ಮಾಡಿದ ಧರ್ಮ ದ್ರೋಹದ ಕಾರ್ಯ ಪಕ್ಷದ ಮುಖಂಡರಿಗೂ ಗೊತ್ತಾಗಬೇಕು.ಕೇವಲ ಅಭಿವೃದ್ಧಿ ಚಟುವಟಿಕೆಗಳು ನಡೆದರೆ ಸಾಲದು ಇದರ ಜತೆಗೆ ಜನರ ಬದುಕು ಕಟ್ಟುವ ಕೆಲಸವಾಗಬೇಕು. ಶಾಸಕರು ಕಾರ್ಕಳದಲ್ಲಿ ಜಾತಿಯ ವಿಷಬೀಜ ಬಿತ್ತಿ ರಾಜಕಾರಣದ ಪರಂಪರೆಯ ಆರಂಭಿಸಿದವರು ಜಾತಿಗಳ ನಡುವೆ ದ್ವೇಷ ಹರಡಿಸಿದ್ದಾರೆ.
ಪರಶುರಾಮ ಥೀಮ್ ಪಾರ್ಕ್ ಕೇವಲ ಚುನಾವಣಾ ವಿಷಯವಾಗಬಾರದು ಬದಲಾಗಿ ನಮಸ್ತ ತುಳುನಾಡಿನ ಹೆಮ್ಮೆಯಾಗಬೇಕು ಎಂದರು.