ಹೈದರಾಬಾದ್:ಮೇ 18: ಕಾರು ಅಪಘಾತದಲ್ಲಿ ನಟಿ ಪವಿತ್ರಾ ಜಯರಾಮ್ ಮೇ 12 ರಂದು ನಿಧನರಾಗಿದ್ದರು. ಅದೇ ಕಾರ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ನಟ ಚಂದ್ರಕಾಂತ್ ಅಲಿಯಾಸ್ ಚಲ್ಲ ಚಂದು ಅವರು ನಿನ್ನೆ ಮೇ 17 ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ
ಕಾರಿನಲ್ಲಿ ಪವಿತ್ರಾ ಜಯರಾಮ್, ಚಂದು ಅವರು ಅಕ್ಕ-ಪಕ್ಕ ಕೂತಿದ್ದರು. ಅಪಘಾತ ಆಗುತ್ತಿದ್ದಂತೆ ಪವಿತ್ರಾ ಅವರು ಚಂದು ನೋಡಿ ಏನಾಯ್ತು ಅಂತ ಕರೆದಿದ್ದಾರೆ. ಆಗ ಚಂದುಗೆ ಗಾಯ ಆಗಿತ್ತು, ಅಷ್ಟೇ ಅಲ್ಲದೆ ಪ್ರಜ್ಞೆ ತಪ್ಪಿದೆ, ಪವಿತ್ರಾಗೂ ಬ್ರೇನ್ ಸ್ಟ್ರೋಕ್ ಆಗಿತ್ತು. 20 ನಿಮಿಷ ಆಂಬುಲೆನ್ಸ್ ಬರೋದು ಲೇಟ್ ಆಗಿತ್ತು. ಹೀಗಾಗಿ ಪವಿತ್ರಾ ಸಾವನ್ನಪ್ಪಿದ್ದರು ಎನ್ನಲಾಗಿದೆ. ಈ ವಿಷಯವನ್ನು ಸ್ವತಃ ಚಂದು ಅವರೇ ಮಾಧ್ಯಮದ ಮುಂದೆ ಹೇಳಿದ್ದರು. “ಪವಿತ್ರಾ ಮುಖದ ಮೇಲೆ, ದೇಹದ ಮೇಲೆ ಇದ್ದಿದ್ದು ನನ್ನ ರಕ್ತ. ಪವಿತ್ರಾಗೆ ಏನೂ ಆಗಿರಲಿಲ್ಲ. ನನಗೆ ಗಾಯ ಆಯ್ತು, ರಕ್ತ ಬಂತು ಅಂತ ಹೆದರಿ ಪವಿತ್ರಾ ಪ್ರಜ್ಞೆ ತಪ್ಪಿದ್ದಳು. ವೈದ್ಯರು ಹೃದಯಾಘಾತ, ಬ್ರೇನ್ ಸ್ಟ್ರೋಕ್ ಆಗಿದೆ ಅಂತ ಹೇಳಿದ್ದರು” ಎಂದು ಚಂದ್ರಕಾಂತ್ ಹೇಳಿದ್ದರು.
ಸೋಶಿಯಲ್ ಮೀಡಿಯಾದಲ್ಲಿ ಕಾಣುವಂತೆ ಪವಿತ್ರಾ ಜಯರಾಮ್ ಹಾಗೂ ಚಂದು ಅವರು ಆತ್ಮೀಯವಾಗಿದ್ದರು. ಇವರಿಬ್ಬರು ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು, ಶೀಘ್ರದಲ್ಲಿ ಮದುವೆಯಾಗುವ ಪ್ಲ್ಯಾನ್‌ನಲ್ಲಿ ಇದ್ದರು ಎನ್ನಲಾಗಿತ್ತು. ಪವಿತ್ರಾ ನಿಧನದ ನಂತರದಲ್ಲಿ ಮಾಧ್ಯಮದ ಜೊತೆ ಮಾತನಾಡಿದ್ದ ಚಂದು ಅವರು “ನಾವು ಆದಷ್ಟು ಬೇಗ ನಮ್ಮ ಪ್ರೀತಿಯನ್ನು ಅಧಿಕೃತವಾಗಿ ಹೇಳಬೇಕು ಎಂದುಕೊಂಡಿದ್ದೆವು” ಎಂದಿದ್ದರು. ಈಗ ಪವಿತ್ರಾ ಸಾವಿನ ದುಃಖವನ್ನು ತಡೆದುಕೊಳ್ಳಲಾಗದೆ ಚಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಹೈದರಾಬಾದ್‌ನ ಮಣಿಕೊಂಡದಲ್ಲಿರುವ ಮನೆಯಲ್ಲಿ ಚಂದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಇದಕ್ಕೆ ನಿರ್ದಿಷ್ಟ ಕಾರಣ ಏನು ಅಂತ ತಿಳಿದುಬಂದಿಲ್ಲ. ಪವಿತ್ರಾ, ಚಂದ್ರಕಾಂತ್ ಅವರು ಕೆಲ ವರ್ಷಗಳಿಂದ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಅದೇ ಮನೆಯಲ್ಲಿ ಚಂದು ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.