ಮಣಿಪಾಲ,:ಮೇ 16: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ವೆಲ್‌ಕಮ್‌ಗ್ರೂಪ್ ಗ್ರಾಜ್ಯುಯೇಟ್ ಸ್ಕೂಲ್ ಆಫ್ ಹೊಟೇಲ್ ಎಡ್ಮಿನಿಸ್ಟ್ರೇಶನ್ [ಡಬ್ಲ್ಯುಜಿಎಸ್‌ಎಚ್‌ಎ ಅಥವಾ ವಾಗ್ಷ] ಸಂಸ್ಥೆಯು ಕೌಶಲ ತರಬೇತಿಯ ಉತ್ಕೃಷ್ಟ ಕೇಂದ್ರ [ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸ್ಕಿಲ್ ಟ್ರೈನಿಂಗ್] ವನ್ನು ಆರಂಭಿಸಿದ್ದು ಇದರ ಉದ್ಘಾಟನೆಯು ಮೇ 15, 2024 ರಂದು ನಡೆಯಿತು. ಅತಿಥಿ ಗಣ್ಯರು ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿದ್ದು, ಈ ಕಾರ್ಯಕ್ರಮದಲ್ಲಿ ಆತಿಥೇಯ ಉದ್ಯಮದಲ್ಲಿ ಕೌಶಲಾಭಿವೃದ್ಧಿಯ ಪ್ರಾಮುಖ್ಯವು ಗಮನಸೆಳೆಯಿತು.
ಪ್ರವಾಸೋದ್ಯಮ ಮತ್ತು ಆತಿಥೇಯ ಉದ್ಯಮದ ಕೌಶಲ ಮಂಡಳಿ [ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ ಸ್ಕಿಲ್ ಕೌನ್ಸಿಲ್ ಅಥವಾ ಟಿಎಚ್‌ಎಸ್‌ಸಿ] ಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜನ್ ಬಹದೂರ್ ಅವರು ಕೇಂದ್ರವನ್ನು ಉದ್ಘಾಟಿಸುತ್ತ ಮಾತನಾಡಿ, ‘ ಆತಿಥೇಯ ಸಂಸ್ಕೃತಿಯ ಭವಿಷ್ಯವನ್ನು ರೂಪಿಸುವಲ್ಲಿ ವಾಗ್‌ಶದಂಥ ಸಂಸ್ಥೆಗಳ ಪಾತ್ರವನ್ನು ಒತ್ತಿಹೇಳಿದರು. ವಾಗ್ಷದ ಕೊಡುಗೆಗಳನ್ನು ಶ್ಲಾಘಿಸಿದರಲ್ಲದೆ, ಅಂಥ ಸಂಸ್ಥೆಯೊಂದಿಗೆ ತಾವು ಸಹಭಾಗಿತ್ವವನ್ನು ಹೊಂದಿರುವುದಕ್ಕಾಗಿ ಹೆಮ್ಮೆಯನ್ನು ವ್ಯಕ್ತಪಡಿಸಿದರು. ಪ್ರವಾಸೋದ್ಯಮ ಮತ್ತು ಆತಿಥೇಯ ಕೌಶಲ ಮಂಡಳಿ [ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ ಸ್ಕಿಲ್ ಕೌನ್ಸಿಲ್-ಟಿಎಚ್‌ಎಸ್‌ಸಿ], ರಾಷ್ಟ್ರೀಯ ಕೌಶಲಾಭಿವೃದ್ಧಿ ನಿಗಮ [ನೇಶನಲ್ ಸ್ಕಿಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್-ಎನ್‌ಎಸ್‌ಡಿಸಿ] ಮತ್ತು ವಾಗ್ಷದ ನಡುವಿನ ಸಹಭಾಗಿತ್ವವು ಆತಿಥೇಯ ವಲಯದಲ್ಲಿ ಕೌಶಲದ ಗುಣಮಟ್ಟವನ್ನು ವೃದ್ಧಿಸಲಿದೆ ಎಂದರು.
ತಮ್ಮ ಮಾತನ್ನು ಮುಂದುವರಿಸುತ್ತ, ‘ನಾವಿಂದು ಆತಿಥೇಯ ಉದ್ಯಮದ ನಿರ್ಣಾಯಕ ಸಂಧಿಕಾಲದಲ್ಲಿ ಇದ್ದೇವೆ. ಈ ಕ್ಷೇತ್ರದಲ್ಲಿ ಕೌಶಲಪೂರ್ಣ ವೃತ್ತಿಪರರ ಅಗತ್ಯ ಹೆಚ್ಚುತ್ತಿದೆ. ಈ ಬೇಡಿಕೆಯನ್ನು ಪೂರೈಸುವಲ್ಲಿ ವಾಗ್ಷದಂಥ ಸಂಸ್ಥೆಯು ಗುಣಮಟ್ಟದ ಶಿಕ್ಷಣ ಮತ್ತು ಪ್ರಾಯೋಗಿತ ತರಬೇತಿಯನ್ನು ನೀಡುವುದರ ಮೂಲಕ ಪ್ರಧಾನ ಪಾತ್ರ ವಹಿಸುತ್ತಿದೆ. ವಾಗ್ಷದೊಂದಿಗೆ ಸಹಭಾಗಿತ್ವವನ್ನು ಹೊಂದಿರಲು ಮತ್ತು ಸೆಂಟರ್ ಆಫ್ ಎಕ್ಸಲೆನ್ಸ್ ಎಂದು ಮಾನ್ಯ ಮಾಡಲು ಅಭಿಮಾನ ಎನಿಸುತ್ತಿದೆ. ಈ ಯೋಜನೆಯ ಗುರಿ ಕೇವಲ ವೃತ್ತಿಪರರ ಕೌಶಲ ಅಭಿವೃದ್ದಿ ಪಡಿಸುವುದು ಅಲ್ಲ, ಆತಿಥೇಯ ಉದ್ಯಮದಲ್ಲಿ ಅಭಿವೃದ್ಧಿ ಮತ್ತು ನಾವೀನ್ಯವನ್ನು ಪ್ರೋತ್ಸಾಹಿಸಿ, ಉದ್ಯೋಗವಕಾಶಗಳನ್ನು ಹೆಚ್ಚಿಸುವುದು ಕೂಡ ಆಗಿದೆ. ಟಿಎಚ್‌ಎಸ್‌ಸಿ ಮತ್ತು ಎನ್‌ಎಸ್‌ಡಿಸಿ ಸಂಸ್ಥೆಗಳ ಬೆಂಬಲದೊಂದಿಗೆ ವಾಗ್ಷವು ಶಿಕ್ಷಣ ಮತ್ತು ತರಬೇತಿಯಲ್ಲಿ ಹೊಸ ಮೈಲಿಗಲ್ಲನ್ನು ಸ್ಥಾಪಿಸಲಿದೆ’ ಎಂದರು.
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ]ಯ ಸಹ-ಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳ್ ಅವರು ಮಣಿಪಾಲ ಸಂಸ್ಥೆಗಳ ಸಂಸ್ಥಾಪಕ ಕೀರ್ತಿಶೇಷ ಡಾ. ಟಿ. ಎಂ. ಎ. ಪೈಯವರು 1950 ರಲ್ಲಿಯೇ ಹುಟ್ಟು ಹಾಕಿದ ಕೌಶಲಾಭಿವೃದ್ಧಿಯ ಪರಂಪರೆಯನ್ನು ನೆನಪಿಸಿಕೊಂಡರು. ಟಿಎಚ್‌ಎಸ್‌ಸಿ ಮತ್ತು ಎನ್‌ಎಸ್‌ಡಿಸಿ ಸಂಸ್ಥೆಗಳು ವಾಗ್ಷವನ್ನು ಸೆಂಟರ್ ಆಫ್ ಎಕ್ಸಲೆನ್ಸ್ ಎಂದು ಮಾನ್ಯತೆ ಮಾಡಿರುವುದಕ್ಕೆ ಕೃತಜ್ಞತೆ ಹೇಳಿದರಲ್ಲದೆ, ವ್ಯಕ್ತಿ ಸಬಲೀಕರಣ ಮತ್ತು ಕ್ಷೇಮಾಭಿವೃದ್ಧಿಯಲ್ಲಿ ಈ ಸಂಸ್ಥೆಗಳು ವಹಿಸುತ್ತಿರುವ ಪಾತ್ರದ ಕುರಿತು ಗಮನ ಸೆಳೆದರು.
ವಾಗ್ಷದ ಪ್ರಾಂಶುಪಾಲರಾದ ಚೆಫ್. ಕೆ. ತಿರುಗ್ನಾನಸಂಬಂಧಂ ಅವರು ಮಾತನಾಡುತ್ತ, ‘ಟಿಎಚ್‌ಎಸ್‌ಸಿ ಮತ್ತು ಎನ್‌ಎಸ್‌ಡಿಎಸ್‌ನಿಂದ ವಾಗ್ಷಕ್ಕೆ ಮಾನ್ಯತೆ ದೊರೆತಿರುವುದು ಮಹತ್ತ್ವದ ಹೆಜ್ಜೆಯಾಗಿದೆ. ಇಂಥ ಮಾನ್ಯತೆಯಿಂದ ಕರ್ನಾಟಕದ ಆತಿಥೇಯ ವಲಯದಲ್ಲಿ ಯುವಕರಿಗೆ ಹೊಸ ಉದ್ಯೋಗವಕಾಶಗಳನ್ನು ಸೃಷ್ಡಿಸುವ ಸಾಧ್ಯತೆಗಳಿವೆ’ ಎಂದರು.
ಸೆಂಟರ್ ಫಾರ್ ಎಕ್ಸಲೆನ್ಸ್‌ನಲ್ಲಿ ಆರು ತಿಂಗಳು ಬೋಧನೆ ಮತ್ತು ಪ್ರಾಯೋಗಿಕ ತರಗತಿಗಳು ಮತ್ತು ಉಳಿದ ಆರು ತಿಂಗಳಿನಲ್ಲಿ ಉದ್ಯೋಗ-ಪೂರ್ವ ಶಿಕ್ಷಣ [ಇಂಟರ್ನ್‌ಶಿಪ್] ದ ಮೂಲಕ ಅನುಭವ ಪಡೆಯಲು ಅವಕಾಶವಿದೆ. ಇಂಟರ್ನ್‌ಶಿಪ್‌ನ ಅವಧಿಯಲ್ಲಿ ವಿದ್ಯಾರ್ಥಿಗಳು ಹೊಟೇಲ್ ನಿರ್ವಹಣೆಯ ನೇರ ಅನುಭವವನ್ನು ಪಡೆಯಲಿದ್ದಾರೆ. ಉತ್ತೀರ್ಣರಾದ ವಿದ್ಯಾರ್ಥಿಗಳು ಆತಿಥೇಯ ಶಿಕ್ಷಣದಲ್ಲಿ ಪ್ರಾವೀಣ್ಯವನ್ನು ಪಡೆದ ದ್ಯೋತಕವಾಗಿ ಟಿಎಚ್‌ಎಸ್‌ಸಿ ಮತ್ತು ಡಬ್ಲ್ಯುಜಿಎಸ್‌ಎಚ್‌ಎ [ವಾಗ್ಷ] ದಿಂದ ಜಂಟಿಯಾಗಿ ಪ್ರಮಾಣ ಪತ್ರವನ್ನು ಪಡೆಯಲಿದ್ದಾರೆ.
ಈ ಕೌಶಲ ಕೇಂದ್ರದ ಉದ್ಘಾಟನೆಯು ಭಾರತದ ಪ್ರವಾಸೋದ್ಯಮದಲ್ಲಿ ಕೌಶಲಪೂರ್ಣ ವೃತ್ತಿಪರರ ಬೇಡಿಕೆ ಅಧಿಕವಾಗುತ್ತಿರುವ ಸಂದರ್ಭದಲ್ಲಿಯೇ ನಡೆದಿರುವುದು ಗಮನಾರ್ಹವಾಗಿದೆ. ಈ ಯೋಜನೆಯು 2033 ರಲ್ಲಿ 19.4 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿವೆ ಮತ್ತು 8.4 % ಸಂಯುಕ್ತ ವಾರ್ಷಿಕ ಅಭಿವೃದ್ಧಿ ದರ [ಕಂಪೌಂಡ್ ಆ್ಯನುವಲ್ ಗ್ರೋತ್ ರೇಟ್-ಸಿಎಜಿಆರ್] ಹೊಂದಿರುವ ಗುರಿಯನ್ನು ಹೊಂದಿದೆ. ಆತಿಥೇಯ ಉದ್ಯಮದಲ್ಲಿ ಇರುವ ಕೌಶಲದ ಕೊರತೆಯನ್ನು ಪ್ರಸ್ತುತ ವಾಗ್ಷ ಮತ್ತು ಇತರ ಸಂಸ್ಥೆಗಳು ಕೈಗೊಂಡ ಉಪಕ್ರಮ[ಇನಿಶಿಯೇಟಿವ್] ವು ನಿವಾರಿಸಲಿದೆ.
ವಾಗ್ಷದಲ್ಲಿ ಆರಂಭವಾಗಿರುವ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಸ್ಕಿಲ್ ಟ್ರೈನಿಂಗ್ ಆತಿಥೇಯ ಉದ್ಯಮದ ಮಹತ್ವಾಕಾಂಕ್ಷಿ ವೃತ್ತಿಪರರಿಗೆ ಭರವಸೆಯ ಬೆಳಕಾಗಲಿದೆ ಮತ್ತು ಈ ವಲಯದಲ್ಲಿ ಉದ್ಯೋಗ ಸಾಧ್ಯತೆಯ ಹೊಸ ಹಾದಿಯನ್ನು ತೆರೆಯಲಿದೆ.