ಹುಬ್ಬಳ್ಳಿ:ಮೇ 15: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಯುವತಿಯೊಬ್ಬಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿಯ ವೀರಾಪುರದಲ್ಲಿ ನಡೆದಿದೆ.
ವೀರಾಪುರ ಓಣಿಯ ದೇವಿಗುಡಿ ನಿವಾಸಿ ಅಂಜಲಿ (20) ಕೊಲೆಯಾದ ಯುವತಿ. ಗಿರೀಶ್ ಸಾವಂತ್ (21) ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ. ಆರೋಪಿ ಗಿರೀಶ್ ಅಂಜಲಿ (20) ಎಂಬಾಕೆಯನ್ನು ಕಳೆದ ಹಲವು ದಿನಗಳಿಂದ ಪ್ರೀತಿಸುವಂತೆ ಪೀಡಿಸುತ್ತಿದ್ದು, ಆದರೆ ಅಂಜಲಿ ಪ್ರೀತಿ ನಿರಾಕರಿಸಿದ್ದಳು ಎನ್ನಲಾಗಿದೆ.
ಇಂದು ಬೆಳ್ಳಂಬೆಳಗ್ಗೆ ಯುವತಿಯ ಮನೆಯ ಬಾಗಿಲು ತಟ್ಟಿದ ಗಿರೀಶ್, ಬಾಗಿಲು ತೆರೆಯುತ್ತಿದ್ದಂತೆಯೇ ಆಕೆಯ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಈ ಹಿಂದೆ ಮೈಸೂರಿಗೆ ಬಾ ಎಂದು ಅಂಜಲಿಗೆ ಗಿರೀಶ್ ಧಮ್ಕಿ ಹಾಕಿದ್ದ. ಅಕಸ್ಮಾತ್ ನೀನು ನನ್ನ ಜೊತೆ ಬರದೆ ಹೋದರೆ ನಿರಂಜನ ಹಿರೇಮಠ ಮಗಳಿಗೆ ಆದ ಹಾಗೆಯೇ ನಿನಗೂ ಮಾಡುತ್ತೇನೆ ಎಂದು ಧಮ್ಕಿ ಹಾಕಿದ್ದ. ಈತನ ವಿರುದ್ಧ ಹಲವು ಕಳ್ಳತನ ಪ್ರಕರಣಗಳಲ್ಲಿ ಶಾಮೀಲಾದ ಆರೋಪವೂ ಇದೆ. ಜತೆಗೆ, ಬೈಕ್ ಕಳ್ಳತನದಲ್ಲಿಯೂ ಆರೋಪಿಯಾಗಿದ್ದಾನೆ.
ಸ್ಥಳಕ್ಕೆ ಬೆಂಡಿಗೇರಿ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.