ಬೆಂಗಳೂರು : ಮೇ.15: ಚಲನಚಿತ್ರ ನಟಿ ಛಾಯಾಸಿಂಗ್ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ಅವರ ಮನೆ ಕೆಲಸದಾಳನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಎನ್‌ಜಿಓಎಸ್ ಕಾಲೋನಿ ನಿವಾಸಿ ಉಷಾ ಬಂಧಿತಳಾಗಿದ್ದು, ಆರೋಪಿಯಿಂದ ₹4 ಲಕ್ಷದ 66 ಗ್ರಾಂ ಚಿನ್ನ ಹಾಗೂ 155 ಗ್ರಾಂ ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಮನೆಯಲ್ಲಿ ಬೀರುವಿನ ಲಾಕರ್ ತೆಗೆದು ಆಭರಣ ಕಳವು ಮಾಡುವಾಗ ಉಷಾ ರೆಡ್ ಹ್ಯಾಂಡ್ ಆಗಿ ಛಾಯಾಸಿಂಗ್ ತಾಯಿ ಚಮನ್ ಲತಾಗೆ ಸಿಕ್ಕಿಬಿದ್ದಳು. ಈ ಬಗ್ಗೆ ನಟಿ ತಾಯಿ ನೀಡಿದ ದೂರಿನನ್ವಯ ಆರೋಪಿಯನ್ನು ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ
ಕಳೆದ ತಿಂಗಳಿಂದ ಎನ್‌ಎಚ್‌ಸಿಎಸ್ ಲೇಔಟ್‌ನಲ್ಲಿರುವ ಛಾಯಾ ಸಿಂಗ್ ಮನೆ ಯಲ್ಲಿ ಉಷಾ ಕೆಲಸ ಮಾಡುತ್ತಿದ್ದಳು. ಆ ವೇಳೆ ಮನೆಯವರಿಗೆ ತಿಳಿಯದಂತೆ ಒಂದೊಂದಾಗಿ ಬೆಳ್ಳಿ, ಚಿನ್ನಾಭರಣಗಳನ್ನು ಆಕೆ ಕಳವು ಮಾಡಿದ್ದಳು. ತಾನು ಮಾಡಿಕೊಂಡಿದ್ದ ಸಾಲ ತೀರಿಸುವ ಸಲುವಾಗಿ ಛಾಯಾಸಿಂಗ್ ಅವರ ಮನೆ ಯಲ್ಲಿ ಆಭರಣ ಮತ್ತು ಹಣವನ್ನು ಕಳವು ಮಾಡಿದ್ದಾಗಿ ವಿಚಾರಣೆ ವೇಳೆ ಆರೋಪಿ ತಪ್ರೊಪ್ಪಿಕೊಂಡಿದ್ದಾಳೆ. ಇನ್ನು ವಶಪಡಿಸಿ ಕೊಂಡಿದ್ದ ಆಭರಣಗಳನ್ನು ನಟಿ ಛಾಯಾ ಸಿಂಗ್‌ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮರಳಿಸಿದರು.