ಮಂಗಳೂರು, ಮೇ 11: ಮಾವಿನ ಸೀಸನ್ ಆರಂಭವಾಗಿದ್ದು, ಮಾರುಕಟ್ಟೆಗೆ ಬಗೆ ಬಗೆಯ ಮಾವಿನ ಹಣ್ಣು ಬರುತ್ತಿವೆ. ಆದರೆ ಇದರೊಂದಿಗೆ ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡಿದ ಮಾವಿನ ಹಣ್ಣುಗಳು ಪತ್ತೆ ಆಗಿವೆ. ಹೀಗಾಗಿ ಮಾವಿನ ಹಣ್ಣು ತಿನ್ನುವವರು ಎಚ್ಚರಿಕೆ ವಹಿಸಬೇಕಿದೆ.
ರಾಸಾಯನಿಕ ಬಳಸಿ ಕೃತಕವಾಗಿ ಮಾವಿನ ಕಾಯಿ ಹಣ್ಣು ಮಾಡುವ ಆರೋಪ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆಯಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ತಪಾಸಣೆ ಅಧಿಕಾರಿಗಳ ಕಾರ್ಯಾಚರಣೆ ಮಾಡಿದ್ದು, ಮಾವಿನ ಹಣ್ಣು ಮಾರಾಟ ಅಂಗಡಿಗಳ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ ಪತ್ತೆಯಾದ ರಾಸಾಯನಿಕ ಮಾವಿನ ಹಣ್ಣುಗಳ ರಾಶಿಯನ್ನು ಅಧಿಕಾರಿಗಳು ತೆರವು ಮಾಡಿದ್ದಾರೆ.
ಹಣ್ಣು ಖರೀದಿ ಮಾಡುವಾಗಲೇ ಈ ಬಗ್ಗೆ ಪರೀಕ್ಷೆ ಮಾಡುವಂತೆ ವ್ಯಾಪಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದೆ ಕೃತಕವಾಗಿ ಹಣ್ಣು ಮಾಡಿದ ಮಾವಿನ ಹಣ್ಣುಗಳ ಮಾರಾಟ ಮಾಡದಂತೆ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.
ಮೂಡುಬಿದರೆಯಲ್ಲಿ ರಸ್ತೆ ಬದಿಯಲ್ಲಿ ವಾಹನಗಳಲ್ಲಿ ಹಣ್ಣಿನ ವ್ಯಾಪಾರ ಮಾಡುವವರು ಮಾವಿನ ಹಣ್ಣು ಸೇರಿದಂತೆ ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣು ಮಾಡುತ್ತಿರುವ ಆರೋಪ ಹಿನ್ನೆಲೆ ರೈಡ್ ಮಾಡಲಾಗಿದೆ. ರಾಸಾಯನಿಕ ಬಳಸಿ ಕೃತಕವಾಗಿ ಹಣ್ಣಾಗಿರುವ ಹಣ್ಣುಗಳನ್ನು ಪತ್ತೆ ಮಾಡಿ ತೆರವು ಮಾಡಲಾಗಿದ್ದು ಮತ್ತು ಮುಂದೆ ಈ ರೀತಿ ಮಾಡದಂತೆ ವ್ಯಾಪಾರಸ್ಥರಿಗೆ ಎಚ್ಚರಿಕೆಯನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.
ವ್ಯಾಪಾರಸ್ಥರು ತಾವು ಖರೀದಿ ಮಾಡುವ ಮೊದಲು ಅದಕ್ಕೆ ಕೃತಕವಾಗಿ ಹಣ್ಣಾಗುವ ರಾಸಾಯನಿಕ ಬಳಕೆ ಮಾಡಲಾಗಿದೇಯೆ ಎಂಬುವುದನ್ನು ಮೊದಲೇ ಪರೀಕ್ಷೆ ಮಾಡಿಕೊಳ್ಳಬೇಕು. ಬಳಿಕ ಅದನ್ನು ತಂದು ಗ್ರಾಹಕರಿಗೆ ಮಾರಾಟ ಮಾಡಬಹುದು ಎಂದು ಸೂಚನೆ ನೀಡಿದ್ದೇವೆ ಎಂದು ಹೇಳಿದ್ದಾರೆ.