ಮಂಗಳೂರು :ಮೇ 9: ಪಡೀಲ್ ಸಮೀಪದ ನಾಗುರಿ-ಅಳಪೆಯ ಮಧ್ಯೆ ಸ್ಕಿಡ್ಡಾಗಿ ಬಿದ್ದ ಸ್ಕೂಟರ್ ಮೇಲೆ ಟಿಪ್ಪರ್ ಹರಿದ ಪರಿಣಾಮ ಓರ್ವ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಯುವಕರು ಗಂಭೀರ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ.
ಮೃತಪಟ್ಟ ಯುವಕನನ್ನು ಎಕ್ಕೂರಿನ ನಿವಾಸಿ ಹರ್ಷನ್ ಎಂದು ಗುರುತಿಸಲಾಗಿದೆ. ಕೀರ್ತನ್ ಮತ್ತು ಕಿಶೋರ್ ಎಂಬವರು ಗಾಯಗೊಂಡವರಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಡೀಲ್‌ನಿಂದ ಪಂಪ್‌ವೆಲ್‌ಗೆ ಚಲಿಸುತ್ತಿದ್ದ ಸ್ಕೂಟರ್ ನಾಗುರಿ-ಅಳಪೆಯ ಮಧ್ಯೆ ಸ್ಕಿಡ್ಡಾಗಿ ಹೆದ್ದಾರಿಗೆ ಮಗುಚಿ ಬಿತ್ತು. ಇದರಿಂದ ಸ್ಕೂಟರ್‌ನಲ್ಲಿದ್ದ ಮೂವರೂ ರಸ್ತೆಗೆ ಎಸೆಯಲ್ಪಟ್ಟರು. ಅದೇ ರಸ್ತೆಯಲ್ಲಿ ವೇಗದಲ್ಲಿ ಚಲಿಸುತ್ತಿದ್ದ ಟಿಪ್ಪರ್ ಹರ್ಷನ್ ಅವರ ಮೇಲೆಯೇ ಹರಿದಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.