ಮಣಿಪಾಲ:ಮೇ 05:ಬ್ಯಾಂಕ್ ಅಧಿಕಾರಿಯೆಂದು ನಂಬಿಸಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಲಕ್ಷಾಂತರ ರೂ. ವಂಚಿಸಿದ ಘಟನೆ ನಡೆದಿದೆ.
ಮಣಿಪಾಲದ ತ್ರೇಸಿಯಮ್ಮ ಅವರು ಕೆನರಾ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದರು ಮೇ 4ರಂದು ಅವರ ಮೊಬೈಲ್ ಸಂಖ್ಯೆಗೆ ಅನಾಮಧೇಯ ವ್ಯಕ್ತಿ ಕರೆ ಮಾಡಿ ತಾನು ಕೆನರಾ ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಅವರ ಖಾತೆ ನಂಬರ್, ಕಸ್ಟಮರ್ ಐಡಿ, ಆಧಾರ್ ನಂಬರ್, ಜನ್ಮ ದಿನಾಂಕ ಇತ್ಯಾದಿ ವಿವರಗಳನ್ನು ಪಡೆದಿದ್ದಾನೆ. ಆತನ ಮಾತನ್ನು ನಂಬಿದ ಅವರು ಎಲ್ಲ ವಿವರಗಳನ್ನು ನೀಡಿದ್ದರು. ಅನಂತರ ತ್ರೇಸಿಯಮ್ಮ ಅವರ ಮೊಬೈಲ್‌ಗೆ ಬಂದ ಒಟಿಪಿ ಸಂಖ್ಯೆ ಮತ್ತು ನಾಮಿನಿ ವಿವರವನ್ನು ಸಹ ನೀಡಿದ್ದರು.
ಸ್ವಲ್ಪ ಹೊತ್ತಿನ ಬಳಿಕ ಅಪರಿಚಿತ ವ್ಯಕ್ತಿಗಳು ತ್ರೇಸಿಯಮ್ಮ ಹಾಗೂ ಅವರ ಪತಿ(ನಾಮಿನಿ)ಯ ಖಾತೆಯಲ್ಲಿದ್ದ 3,91,563 ರೂ.ಗಳನ್ನು ಅಕ್ರಮವಾಗಿ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ. ಈ ಬಗ್ಗೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.