ಮಂಗಳೂರು:ಮೇ 03:ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ಲಕ್ಷದ್ವೀಪದ ಪ್ರಯಾಣಿಕರ ವೇಗದ ನೌಕೆ ‘ಹೈ ಸ್ಪೀಡ್ ಮಿನಿ ಹಡಗು ಮಂಗಳೂರಿಗೆ ಆಗಮಿಸಿದೆ.
160 ಮಂದಿ ಲಕ್ಷದ್ವೀಪ ನಿವಾಸಿಗಳೊಂದಿಗೆ ಮಂಗಳೂರಿನ ಹಳೆಬಂದರು ಜೆಟ್ಟಿಗೆ ಗುರುವಾರ ಸಂಜೆ5 ಕ್ಕೆ ಆಗಮಿಸಿತು. ಹಿಂದಿನ ವ್ಯವಸ್ಥೆಯಲ್ಲಿ ಲಕ್ಷದ್ವೀಪದಿಂದ ಬರಲು 13 ಗಂಟೆ ತಗುಲುತ್ತಿತ್ತು. ಈಗ ಹೈಸ್ಪೀಡ್ ನೌಕೆಯಲ್ಲಿ ಕೇವಲ 7 ಗಂಟೆ ಅವಧಿ ಮಾತ್ರ ಸಾಕಾಗುತ್ತದೆ. ನೌಕೆ ಸದ್ಯ ಟ್ರಯಲ್ ನೆಲೆಯಲ್ಲಿ ಆಗಮಿಸಿದೆ.
ಲಕ್ಷದ್ವೀಪ ನಿವಾಸಿಗಳು ಕುಟುಂಬ ಸದಸ್ಯರನ್ನು ಭೇಟಿ ಮಾಡುವ, ಶಾಪಿಂಗ್ ಮಾಡುವ ಉತ್ಸಾಹದಲ್ಲಿ, ಚಿಕಿತ್ಸೆ ಪಡೆಯುವ ಉದ್ದೇಶಕ್ಕಾಗಿ ನೌಕೆ ಲಾಭದಾಯಕವಾಗಬಹುದು.
2019ರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಲಕ್ಷದ್ಪೀಪ – ಮಂಗಳೂರು ನಡುವೆ ಇದ್ದ ಪ್ರಯಾಣಿಕರ ಹಡಗು ಸಂಚಾರ ನಿಲುಗಡೆಯಾಗಿತ್ತು. ಅದಕ್ಕೂ ಮುನ್ನ ಎರಡು ಮಿನಿ ಹಡಗು ಮಂಗಳೂರು ಹಳೆಬಂದರಿನಿಂದ ಲಕ್ಷದ್ವೀಪಕ್ಕೆ ಹೋಗಿ ಬರುತ್ತಿತ್ತು. ಇದೀಗ ಐದು ವರ್ಷಗಳ ಬಳಿಕ ಅದರಲ್ಲೂ ಅತಿ ವೇಗವಾಗಿ ಸಾಗುವ ಪ್ಯಾಸೆಂಜರ್ ಮಿನಿ ಹಡಗು ಮಂಗಳೂರಿಗೆ ಬಂದಿದ್ದು, ಲಕ್ಷದ್ವೀಪದ 150 ಮಂದಿ ಪ್ರಯಾಣಿಕರು ಆಗಮಿಸಿದ್ದಾರೆ.