ಉಡುಪಿ:ಮೇ 02:ಬೇಸಗೆಯ ತಾಪಮಾನವು ಏರುತ್ತಿದ್ದಂತೆ ಮೊಟ್ಟೆಯ ದರ ಇಳಿಮುಖವಾಗುತ್ತಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 6.50ರ ಆಸುಪಾಸಿನಲ್ಲಿದ್ದ ದರ ಸದ್ಯ ಉಡುಪಿಯಲ್ಲಿ 5.50ರ ಆಸುಪಾಸಿಗೆ ಇಳಿದಿದೆ. ದಾಸ್ತಾನು ಹೆಚ್ಚಿರುವ ಅಂಗಡಿಗಳವರು 10 ಮೊಟ್ಟೆಗಳನ್ನು 52 ರೂ.ಗಳಿಗೆ ನೀಡುತ್ತಿದ್ದಾರೆ.
ರಖಂ ದರ 4.80-4.90 ರೂ.ಗೆ ತಲಪಿದೆ. ಕೆಲವು ದಿನಗಳ ಹಿಂದೆ ದರ 5.20 ರೂ. ತಲುಪಿದ್ದರೂ ಮತ್ತೆ ಈಗ ಇಳಿದಿದೆ.
ತಾಪಮಾನ ಏರಿಕೆಯಿಂದ ಮೊಟ್ಟೆ ಹಾಳಾಗುವ ಕಾರಣ ಹೆಚ್ಚು ದಿನ ದಾಸ್ತಾನು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ದರ ಇಳಿಕೆಯಾಗಿದೆ. ಅಂಗನವಾಡಿಗೆ ಈಗ ರಜೆಯಾಗಿ ರುವುದರಿಂದ ಅಲ್ಲಿಗೆ ಕೂಡ ಮೊಟ್ಟೆ ಹೋಗುತ್ತಿಲ್ಲ. ಮೊಟ್ಟೆ ಉಷ್ಣಕಾರಕ ಎನ್ನುವ ಭಾವನೆ ಇರುವುದರಿಂದ ಬೇಸಗೆಯಲ್ಲಿ ಅದನ್ನು ತಿನ್ನುವವರ ಸಂಖ್ಯೆಯೂ ಕಡಿಮೆಯಾಗಿದೆ. ಆಮ್ಲೆಟ್‌ಗೆ ಕೂಡ ಬೇಡಿಕೆ ಇಳಿಕೆಯಾಗಿದೆ.