ಏಪ್ರಿಲ್ 30: ಆಧುನಿಕ ಆಲೋಪಥಿ ಚಿಕಿತ್ಸಾ ಪದ್ಧತಿಯನ್ನು ಅವಹೇಳನ ಮಾಡಿ, ಮತ್ತು ದಾರಿ ತಪ್ಪಿಸುವ ಜಾಹೀರಾತುಗಳನ್ನು ನೀಡಿ ಸುಪ್ರೀಂಕೋರ್ಟ್ನಿಂದ ತರಾಟೆಗೆ ಒಳಗಾಗುತ್ತಿರುವ ಪತಂಜಲಿ ಆಯುರ್ವೇದ್ ಸಂಸ್ಥೆ ಈಗ ಹಲವು ಉತ್ಪನ್ನಗಳಿಗೆ ಲೈಸೆನ್ಸ್ ಕಳೆದುಕೊಂಡಿದೆ.
15 ಉತ್ಪನ್ನಗಳ ತಯಾರಿಕೆಗೆ ಪತಂಜಲಿ ಸಂಸ್ಥೆಗೆ ನೀಡಲಾಗಿದ್ದ ಪರವಾನಿಗೆಯನ್ನು ಉತ್ತರಾಖಂಡ್ ಸರ್ಕಾರ ರದ್ದು ಮಾಡಿದೆ. ಏಪ್ರಿಲ್ 24ರಂದು ಈ ಸಂಬಂಧ ಇಲ್ಲಿನ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ತಿಳಿದುಬಂದಿದೆ.
ವರದಿ ಪ್ರಕಾರ ಪತಂಜಲಿ ಸಂಸ್ಥೆ ತನ್ನ ಉತ್ಪನ್ನಗಳ ಬಗ್ಗೆ ಸುಳ್ಳು ಮಾಹಿತಿ ನೀಡುವಂತಹ ಜಾಹೀರಾತುಗಳನ್ನು ಪದೇ ಪದೇ ಪ್ರಕಟಿಸುತ್ತಿದ್ದುದರಿಂದ ಮ್ಯಾನುಫ್ಯಾಕ್ಚರಿಂಗ್ ಲೈಸೆನ್ಸ್ ಅನ್ನು ಹಿಂಪಡೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ನಿಷೇಧಿತ ಉತ್ಪನ್ನಗಳಲ್ಲಿ ದಿವ್ಯಾ ಫಾರ್ಮಸಿಯ ದೃಷ್ಟಿ ಐ ಡ್ರಾಪ್, ಸ್ವಸರಿ ಗೋಲ್ಡ್, ಸ್ವಸರಿ ವಟಿ, ಬ್ರಾಂಕೋಮ್, ಸ್ವಸರಿ ಪ್ರವಾಹಿ, ಸ್ವಸರಿ ಅವಲೆಹ್, ಮುಕ್ತಾ ವತಿ ಎಕ್ಸ್‌ಟ್ರಾ ಪವರ್, ಲಿಪಿಡಮ್, ಬಿಪಿ ಗ್ರಿಟ್, ಮಧುಗ್ರಿಟ್, ಮಧುನಾಶಿನಿ ವಟಿ ಎಕ್ಸ್‌ಟ್ರಾ ಪವರ್, ಲಿವಾಮೃತ್ ಅಡ್ವಾನ್ಸ್, ಲಿವೋಗ್ರಿಟ್ ಉತ್ಪನ್ನಗಳು ಸೇರಿವೆ.
ದಾರಿತಪ್ಪಿಸುವ ಜಾಹೀರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಪತಂಜಲಿಯ ದಿವ್ಯ ಫಾರ್ಮಸಿ ತಯಾರಿಸಿದ 14 ಉತ್ಪನ್ನಗಳ ಪರವಾನಗಿಯನ್ನು ಅಮಾನತುಗೊಳಿಸಿರುವುದಾಗಿ ಪರವಾನಗಿ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.