ಉಡುಪಿ, ಏಪ್ರಿಲ್ 25: ದ್ವಿತೀಯ ಪಿಯುಸಿ ಎರಡನೇ ಹಂತದ ಪರೀಕ್ಷೆ ಯನ್ನು ಎಪ್ರಿಲ್ 29ರಿಂದ ಮೇ 16ರವರೆಗೆ ಜಿಲ್ಲೆಯ ಒಟ್ಟು ಮೂರು ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ.
ಪರೀಕ್ಷೆಗಳನ್ನು ಸುಸೂತ್ರವಾಗಿ ಮತ್ತು ದೋಷರಹಿತವಾಗಿ ನಡೆಸಲು, ನಡೆಯಬಹುದಾದ ಎಲ್ಲಾ ರೀತಿಯ ಅವ್ಯವಹಾರ ಗಳನ್ನು ತಡೆಗಟ್ಟುವ ಸಲುವಾಗಿ ಹಾಗೂ ಕಿಡಿಗೇಡಿಗಳು ಪರೀಕ್ಷಾ ಕೇಂದ್ರದ ಪರಿಸರವನ್ನು ಕಲುಷಿತಗೊಳಿಸದಂತೆ ನಿಗದಿಪಡಿಸಿದ ಎಲ್ಲಾ ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀ. ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ, 1973ರ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ ಸೆಕ್ಷನ್ 144 (1)ರಂತೆ ನಿಷೇಧಾಜ್ಞೆ ಜಾರಿಗೊಳಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಅವಧಿಯಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ಇರುವ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಬೇಕು. ನಿಷೇಧಿತ ಪರೀಕ್ಷಾ ಕೇಂದ್ರದ ಸುತ್ತ ಮೊಬೈಲ್ ಬಳಕೆ ನಿಷೇಧಿಸಲಾಗ್ತಿದೆ. ಯಾವುದೇ ಸಾರ್ವಜನಿಕರು ಗುಂಪು ಸೇರುವುದನ್ನು ನಿಷೇಧಿಸಲಾಗಿ ರುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.