ಏಪ್ರಿಲ್ 26:ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 28 ರಿಂದ ಕರ್ನಾಟಕಕ್ಕೆ ಎರಡು ದಿನಗಳ ಭೇಟಿ ನೀಡಲಿದ್ದು, ಮುಖ್ಯವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ನಡೆಸಲಿದ್ದಾರೆ.
ಉತ್ತರ ಕರ್ನಾಟಕ ಪ್ರದೇಶವು ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದು, ಪ್ರಧಾನಿ ಮೋದಿಯವರ ಆಗಮನದಿಂದಾಗಿ ಪಕ್ಷದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ. ಮೋದಿಯವರು ಈ ಭಾಗದ 14 ಲೋಕಸಭಾ ಕ್ಷೇತ್ರಗಳಲ್ಲಿ ಆರು ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿರಸಿಗೆ ಬಂದಿದ್ದ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಬರುತ್ತಿದ್ದಾರೆ. ಶಿರಸಿಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ಪ್ರಧಾನಿಯೊಬ್ಬರು ಶಿರಸಿಗೆ ಬರುತ್ತಿರುವುದು ನಮಗೂ ಖುಷಿ ಇಮ್ಮಡಿಸಿದೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಬುಧವಾರ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಧಾನಿ ಸ್ವಾಗತಕ್ಕೆ ನಡೆಸಲಾದ ಸಿದ್ಧತೆ ಪರಿಶೀಲಿಸಿ ಮಾತನಾಡಿದರು.
ಅವರು ಏ.28ರಂದು ಬೆಳಿಗ್ಗೆ 11ಕ್ಕೆ ಶಿರಸಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಲಿದ್ದಾರೆ. ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಲಿದೆ. ಒಂದು ಲಕ್ಷಕ್ಕೂ ಅಧಿಕ ಜನರು ಆಗಮಿಸಲಿದ್ದಾರೆ ಎಂದರು.
ಮೋದಿ ಅವರು ಹಿಂದೆ ವಿಧಾನ ಸಭೆ ಚುನಾವಣೆಗೆ ಅಂಕೋಲಾಕ್ಕೆ ಬಂದಿದ್ದರು. ಈ ಬಾರಿ ಶಿರಸಿಗೆ ಬರಲಿದ್ದಾರೆ. ತಿಬ್ಬಾದೇವಿ ಟೆಂಟ್ ಹೌಸ್ ಜರ್ಮನ್ ಟೆಂಟನ್ನು ಸಾರ್ವಜನಿಕ ಕಾರ್ಯಕ್ರಮದಲ್ಲಿ ಬಳಸುತ್ತಿದ್ದೇವೆ.
ಪಾರ್ಕಿಂಗ್, ವೇದಿಕೆ, ಕಾರ್ಯಕ್ರಮ, ಇತರ ಸೌಲಭ್ಯ ಎಲ್ಲಕ್ಕೂ ಪ್ರತ್ಯೇಕ ಸಮಿತಿ ರಚಿಸಿ ಕೆಲಸವನ್ನು ಬಿಜೆಪಿ ಕಾರ್ಯಕರ್ತರು, ಪ್ರಮುಖರು ಮಾಡುತ್ತಿದ್ದಾರೆ. ಸಮಾರಂಭ ವ್ಯವಸ್ಥಿತಗೊಳಿಸಲು ಪ್ರಯತ್ನ ನಡೆದಿದೆ ಎಂದರು.