ನವದೆಹಲಿ :ಏಪ್ರಿಲ್ 25: ತನ್ನ ವೇಗದ ಮೂಲಕ ಒಲಂಪಿಕ್ಸ್ನಲ್ಲಿ ಚಿನ್ನದ ಪದಕಗಳ ಭೇಟೆಯಾಡಿದ್ದ ಜಮೈಕಾದ ಶರ ವೇಗದ ಸರದಾರ ಉಸೇನ್ ಬೋಲ್ಟ್ ಅವರನ್ನು ಟಿ20 ವಿಶ್ವಕಪ್‌ನ ರಾಯಭಾರಿಯಾಗಿ ನೇಮಕ ಮಾಡಲಾಗಿದೆ.
ಭಾರತದಲ್ಲಿ ಐಪಿಎಲ್ ನಡೆಯುತ್ತಿದೆ. ಆ ಬಳಿಕ ಇಡೀ ವಿಶ್ವವೇ ಕಾಯುತ್ತಿರುವ ಟಿ20 ವಿಶ್ವಕಪ್ ಆರಂಭವಾಗಲಿದೆ. ಈ ಚುಟುಕು ಸಮರ ಜೂನ್ 2 ರಿಂದ ಆರಂಭವಾಗಲಿದೆ. ಮೊದಲ ಬಾರಿಗೆ ಅಮೇರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಈ ಟೂರ್ನಿಗೆ ಆತಿಥ್ಯವಹಿಸುತ್ತಿವೆ.
8 ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಉಸೇನ್ ಬೋಲ್ಟ್ ಅವರನ್ನು ಏಪ್ರಿಲ್ 24 ಬುಧವಾರದಂದು ಟಿ20 ವಿಶ್ವಕಪ್ 2024 ರ ರಾಯಭಾರಿಯಾಗಿ ನಾಮನಿರ್ದೇಶನ ಮಾಡಲಾಗಿದೆ.
ರಾಯಭಾರಿಯಾಗಿ ನಾಮನಿರ್ದೇಶನವಾದ ಬಳಿಕ ಮಾತನಾಡಿದ ಬೋಲ್ಟ್, ಅಮೆರಿಕ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟೂರ್ನಿಗಳಲ್ಲಿ ಭಾಗವಹಿಸಲು ಎದುರು ನೋಡುತ್ತಿದ್ದೇನೆ. ಮುಂಬರುವ ಟಿ20 ವಿಶ್ವಕಪ್‌ಗೆ ರಾಯಭಾರಿಯಾಗಲು ನಾನು ರೋಮಾಂಚನಗೊಂಡಿದ್ದೇನೆ ಎಂದು ಹೇಳಿದ್ದಾರೆ
ಟಿ20 ವಿಶ್ವಕಪ್ ವಿಚಾರಕ್ಕೆ ಬರುವುದಾದರೆ.. ಲೀಗ್ನ ಮೊದಲ ದಿನ 2 ಪಂದ್ಯಗಳು ನಡೆಯಲಿವೆ. ಭಾರತ ತಂಡ ಜೂನ್ 5 ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಜೂನ್ 9 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ಪಂದ್ಯ ನಡೆಯಲಿದೆ.