ಬೆಂಗಳೂರು :ಏಪ್ರಿಲ್ 21:ಟಿ20 ವಿಶ್ವಕಪ್ನಲ್ಲಿ ಕಣಕ್ಕಿಳಿಯಲಿರುವ ಐರ್ಲೆಂಡ್ ಹಾಗೂ ಸ್ಕಾಟ್ಲೆಂಡ್ ತಂಡಗಳಿಗೆ ಕರ್ನಾಟಕ ಹಾಲು ಒಕ್ಕೂಟ (KMF) ಪ್ರಾಯೋಕತ್ವವಹಿಸಿಕೊಂಡಿದೆ.
ಈ ಮೂಲಕ ಕೆಎಂಎಫ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ವ್ಯಾಲ್ಯೂ ಹೆಚ್ಚಿಸಲು ಮುಂದಾಗಿದೆ. ಯುಎಸ್ಎ ಹಾಗೂ ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಜೂನ್ 1 ರಿಂದ ಶುರುವಾಗಲಿದ್ದು, ಈ ವೇಳೆ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ತಂಡಗಳ ಜೆರ್ಸಿ ಮೇಲೆ ಪ್ರಾಯೋಜಕರಾಗಿ ನಂದಿನಿ ಹೆಸರು ಕಾಣಿಸಿಕೊಳ್ಳಲಿದೆ
ಈ ಬಗ್ಗೆ ಮನಿ ಕಂಟ್ರೊಲ್ ಜೊತೆ ಮಾತನಾಡಿರುವ KMF ವ್ಯವಸ್ಥಾಪಕ ನಿರ್ದೇಶಕ ಎಂ.ಕೆ. ಜಗದೀಶ್, ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಎಂಬ ಎರಡು ತಂಡಗಳನ್ನು ಪ್ರಾಯೋಜಿಸಲು ನಾವು ITW ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಏಪ್ರಿಲ್ 20 ರಂದು ಆದೇಶವನ್ನು ನೀಡಿದ್ದೇವೆ. ಅದರಂತೆ ನಂದಿನಿ ಲೋಗೋ ಲೀಡ್ ಆರ್ಮ್ ಜೆರ್ಸಿಯಲ್ಲಿ ಕಂಡು ಬರುಲಿದೆ. ಅಂದರೆ, ಎಡಗೈ ಬ್ಯಾಟ್ಸ್‌ಮನ್‌ಗಳ ಬಲ ಮತ್ತು ಬಲ ಬ್ಯಾಟ್ಸ್‌ಮನ್‌ಗಳ ಎಡ ಭಾಗದಲ್ಲಿ ನಂದಿನಿ ಲೋಗೋ ಕಾಣಿಸಿಕೊಳ್ಳಲಿದೆ. ಇದು ಕರ್ನಾಟಕದ ಪ್ರತಿಯೊಬ್ಬರಿಗೂ ಹೆಮ್ಮೆಯ ಕ್ಷಣವಾಗಿದೆ ಎಂದು ಅವರು ಹೇಳಿದ್ದಾರೆ.
ಮಿಡಲ್ ಈಸ್ಟ್, ಸಿಂಗಾಪುರ, ಭೂತಾನ್ ಮತ್ತು ಮ್ಯಾನ್ಮಾರ್ ಸೇರಿದಂತೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಕೆಎಂಎಫ್ ಈಗಾಗಲೇ ಮಾರುಕಟ್ಟೆಯನ್ನು ಹೊಂದಿದೆ. ಇದೀಗ ಟಿ20 ವಿಶ್ವಕಪ್ನಲ್ಲಿ ಎರಡು ತಂಡಗಳಿಗೆ ಪ್ರಾಯೋಜಕತ್ವವನ್ನು ವಹಿಸಿಕೊಂಡಿದ್ದೇವೆ. ಈ ಮೂಲಕ ಫ್ರೋಝನ್ ಸಿಹಿತಿಂಡಿಗಳು ಯುಎಸ್‌ಗೆ ಮಾರುಕಟ್ಟೆಯಲ್ಲಿ ಅಸ್ತಿತ್ವವನ್ನು ಸೃಷ್ಟಿಸಿಕೊಳ್ಳುವ ವಿಶ್ವಾಸವಿದೆ ಎಂದು ಜಗದೀಶ್ ತಿಳಿಸಿದ್ದಾರೆ.
ಅಲ್ಲದೆ ಈ ಬಾರಿ ಟಿ20 ವಿಶ್ವಕಪ್ ಸಂದರ್ಭದಲ್ಲಿ ಅಮೆರಿಕದಲ್ಲಿ ಹಾಲಿನಿಂದ ಕೂಡಿದ ಎನರ್ಜಿ ಡ್ರಿಂಕ್ ನಂದಿನಿ ಸ್ಪ್ಲಾಶ್ ಅನ್ನು ಸಹ ಕೆಎಂಎಫ್ ಬಿಡುಗಡೆ ಮಾಡಲಿದೆ. ಈ ಮೂಲಕ ಟಿ20 ವಿಶ್ವಕಪ್ ವೇಳೆ ಅಮೆರಿಕನ್ ಮಾರುಕಟ್ಟೆಯಲ್ಲಿ ಹೊಸ ಉತ್ಪನ್ನವನ್ನು ಪರಿಚಯಿಸಲು ಕರ್ನಾಟಕ ಹಾಲು ಒಕ್ಕೂಟ ನಿರ್ಧರಿಸಿದೆ.