ಉಡುಪಿ :ಏಪ್ರಿಲ್ 20: ಉಡುಪಿ ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹತ್ತಿರದ ತರಕಾರಿ ನಿತ್ಯ ಮಾರುಕಟ್ಟೆಯಲ್ಲಿನ ಮರವೊಂದರ ಕೊಂಬೆ ಇಂದು ಮಧ್ಯಾಹ್ನ ವೇಳೆ ಮುರಿದು ಬಿದ್ದಿದ್ದು, ಇದರಿಂದ ಎರಡು ಅಂಗಡಿಗಳು ಹಾಗೂ ಒಂದು ಕಾರಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ.
ಮಾರುಕಟ್ಟೆಯಲ್ಲಿರುವ ಅಶ್ವಥ ಮರದ ಗೆಲ್ಲು ಮುರಿದು ಬಿದ್ದಿದ್ದು, ಇದರಿಂದ ಮಾರುಕಟ್ಟೆಯಲ್ಲಿರುವ ತರಕಾರಿ ಅಂಗಡಿ ಹಾಗೂ ಹಣ್ಣಿನ ಅಂಗಡಿಗೆ ಹಾನಿಯಾಗಿದೆ. ಅದೇ ರೀತಿ ಮಾರುಕಟ್ಟೆಗೆ ಆಗಮಿಸಿದ್ದ ಗ್ರಾಹಕರೊಬ್ಬರ ಕಾರು ಜಖಂಗೊಂಡಿದೆ.
ಅಲ್ಲದೆ ಮರದ ಕೊಂಬೆ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಕ್ಕೆ ಹಾನಿಯಾಗಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಈ ಅನಾಹುತದಿಂದ ಯಾರಿಗೂ ಗಾಯಗಳಾಗಿಲ್ಲ ಎಂದು ಮೂಲಗಳು ತಿಳಿಸಿವೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ನಗರಸಭೆ ಸಿಬಂದಿ, ಮೆಸ್ಕಾಂ ಸಿಬ್ಬಂದಿ ಮರ ತೆರವುಗೊಳಿಸುವ ಕಾರ್ಯ ನಡೆಸಿದರು.