ಚಿಕ್ಕಬಳ್ಳಾಪುರ, ಏಪ್ರಿಲ್ 19: ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಏಪ್ರಿಲ್ 25 ಮತ್ತು 26ರಂದು ಪ್ರಸಿದ್ಧ ಪ್ರವಾಸಿ ತಾಣ ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. 25ರ ಸಂಜೆ 6ರಿಂದ 26ರ ರಾತ್ರಿ 8ರ ವರೆಗೂ ನಿರ್ಬಂಧ ಇರಲಿದೆ. ಈ ದಿನಗಳಲ್ಲಿ ನಂದಿ ಗಿರಿಧಾಮದಲ್ಲಿರುವ ಅತಿಥಿ ಗೃಹಗಳಿಗೂ ಬೀಗ ಹಾಕಲಾಗುವುದು ಎಂದು ಚಿಕ್ಕಬಳ್ಳಾಪುರ ಡಿಸಿ ಆದೇಶ ತಿಳಿಸಿದೆ
ಲೋಕಸಭೆ ಚುನಾವಣೆಯ 2ನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣದ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ರಾಜ್ಯದಲ್ಲಿ 14 ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ.
ಲೋಕಸಭೆ ಚುನಾವಣೆ ಪ್ರಯುಕ್ತ ಏಪ್ರಿಲ್ 26ರಂದು ಸರ್ಕಾರಿ ರಜೆ ಘೋಷಿಸಲಾಗಿದೆ. ಖಾಸಗಿ ಕಂಪನಿಗಳೂ ಸಹ ರಜೆ ನೀಡುವುದು ಕಡ್ಡಾಯ ಎಂದು ಚುನಾವಣಾ ಆಯೋಗ ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಮರುದಿನ ಶನಿವಾರ ಹಾಗೂ ಅದರ ಮರುದಿನ ಭಾನುವಾರ ಆದ್ದರಿಂದ ಸತತ ಮೂರು ದಿನ ರಜೆ ಎಂದು ಜನ ಪ್ರವಾಸಕ್ಕೆ ಯೋಜನೆ ಮಾಡಿದರೆ ಮತದಾನದ ಪ್ರಮಾಣ ಕಡಿಮೆಯಾಗಲಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಚಿಕ್ಕಬಳ್ಳಾಪುರ ಡಿಸಿ ನಂದಿ ಗಿರಿಧಾಮಕ್ಕೆ ಪ್ರವೇಶ ನಿರ್ಬಂಧಿಸಿದ್ದಾರೆ.