ನವದೆಹಲಿ :ಏಪ್ರಿಲ್ 14: ಬಿಜೆಪಿ ಇಂದು (ಏಪ್ರಿಲ್ 14) ಪ್ರಣಾಳಿಕೆ ಬಿಡುಗಡೆ ಮಾಡಿದೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಣಾಳಿಕೆ ಬಿಡುಗಡೆ ಮಾಡಿದರು.
ನಿರೀಕ್ಷೆಯಂತೆ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಹಲವು ಹೇಳಿಕೆಗಳನ್ನು ನೀಡಲಾಗಿತ್ತು. ಬಡವರು, ರೈತರು, ಮಹಿಳೆಯರು ಸೇರಿದಂತೆ ಎಲ್ಲರ ಏಳಿಗೆಗಾಗಿ ಬಿಜೆಪಿ 14 ಅಂಶಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಬಡವರು, ಯುವಕರು, ರೈತರು, ಮಹಿಳೆಯರು, ಹಿಂದುಳಿದವರು ಮತ್ತು ವಯೋವೃದ್ಧರ ಸಹಭಾಗಿತ್ವದಲ್ಲಿ ‘ಸಬ್ ಕಾ ಸಾಥ್ ಸಬ್ ಕಾ ವಿಕಾಸ್’ ತತ್ವದ ಮೇಲೆ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. 14 ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದೆ ಎಂದಿದ್ದಾರೆ.
ಪ್ರಣಾಳಿಕೆ ಬಿಡುಗಡೆಗೂ ಮುನ್ನ ನರೇಂದ್ರ ಮೋದಿ ಡಾ.ಬಿ.ಆರ್.ಅಂಬೇಡ್ಕರ್ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ್ದಾರೆ. ನಿರ್ಣಯ ಪತ್ರದ ಪ್ರತಿಯನ್ನು ಹರಿಯಾಣದ ರೈತನಿಗೆ, ಘಾಜಿಯಾಬಾದ್‌ನ ಯುವಕನಿಗೆ, ದೆಹಲಿಯ ನಿವಾಸಿಗೆ ಬಿಜೆಪಿಯ ಸಂಕಲ್ಪ ಪತ್ರದ ಪ್ರತಿಯನ್ನು ನೀಡಿದ್ದು ವಿಶೇಷವಾಗಿತ್ತು.
ಪ್ರಣಾಳಿಕೆ ಸಿದ್ಧಪಡಿಸಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಪ್ರಣಾಳಿಕೆ ಸಮಿತಿಯನ್ನು ರಚಿಸಲಾಗಿತ್ತು. ಸಮಿತಿಯನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಡರೇಟ್ ಮಾಡಿದ್ದಾರೆ. ಪಿಯೂಷ್ ಗೋಯಲ್ ಅವರು ಸಹ ಸಂಚಾಲಕರಾಗಿದ್ದರು.
ಇನ್ನುಳಿದಂತೆ ಅರ್ಜುನ್ ಮುಂಡಾ, ಭೂಪೇಂದರ್ ಯಾದವ್, ಕಿರಣ್ ರಿಜಿಜು, ಅಶ್ವಿನಿ ವೈಷ್ಣವ್, ಕಿರಣ್ ರಿಜಿಜು, ಹಿಮಂತ ಬಿಸ್ವಾ ಶರ್ಮಾ, ಸ್ಮೃತಿ ಇರಾನಿ, ವಸುಂಧರಾ ರಾಜೆ, ರವಿಶಂಕರ್ ಪ್ರಸಾದ್, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ರಾಜೀವ್ ಚಂದ್ರಶೇಖರ್ ಸೇರಿ ಹಲವರು ಸಮಿತಿಯ ಸದಸ್ಯರಾಗಿದ್ದರು.