ಕಾರ್ಕಳ :ಏಪ್ರಿಲ್ 12: ರಾಷ್ಟ್ರೀಯ ಹೆದ್ದಾರಿ 169 ರಸ್ತೆ ಕಾಮಗಾರಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಮಂಗಳೂರಿನ ಬಿಕರ್ನ ಕಟ್ಟೆಯವರೆಗೆ ನಿರಂತರವಾಗಿ ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿದೆ…
ಸಾಣೂರು ಪುಲ್ಕೇರಿ ಬೈಪಾಸಿನಿಂದ ಮುರತಂಗಡಿ ಪದವಿ ಪೂರ್ವ ವಿದ್ಯಾಲಯದ ವರೆಗೆ ಸುಮಾರು ನಾಲ್ಕು ಕಿಲೋಮೀಟರ್ ರಸ್ತೆ ಬಹುಭಾಗ ಪೂರ್ಣಗೊಂಡಿದೆ.
ಸಾಣೂರು ಯುವಕ ಮಂಡಲದಿಂದ ಮರತಂಗಡಿವರೆಗೆ ಎರಡು ಬದಿಗಳಲ್ಲಿ ಸರ್ವಿಸ್ ರಸ್ತೆ ಕೂಡ ಬಹುತೇಕ ನಿರ್ಮಾಣ ಗೊಂಡಿದೆ.
ಅರಣ್ಯ ಇಲಾಖೆಯ ನೂತನ ಪ್ರಯೋಗ!?!?
ಈ ಮಧ್ಯೆ ಕಾರ್ಕಳ ಅರಣ್ಯ ಇಲಾಖೆಯವರು ಪುಲಿಕೇರಿ ಬೈಪಾಸಿನಿಂದ ಸಾಣೂರು ಕಡೆಗೆ ಹೋಗುವ ಹೆದ್ದಾರಿಯ ಬಲ ಭಾಗದಲ್ಲಿ ಸಾಣೂರು ಮಠದ ಬೈಲು ಶಿವಾನಂದ ಕುಡ್ವರವರ ಜಮೀನಿನ ಎದುರು ರಸ್ತೆ ಬದಿಯಲ್ಲಿ ಒಂದಷ್ಟು ದೂಪದ ಸಸಿಗಳನ್ನು ಒತ್ತೊತ್ತಾಗಿ ಕೇವಲ ಮೂರು ಅಡಿ ಅಂತರದಲ್ಲಿ ಸಾಲಾಗಿ ನೆಟ್ಟಿರುತ್ತಾರೆ.
ದಿನೇ ದಿನೇ ತಾಪಮಾನ ಏರುತ್ತಿರುವ ಈ ದಿನಗಳಲ್ಲಿ ಸಸಿಗಳಿಗೆ ನೀರು ಹಾಕುವ ವ್ಯವಸ್ಥೆಯನ್ನು ಮಾಡುತ್ತಿಲ್ಲ…
- ಗಿಡಗಳನ್ನು ಒತ್ತೋತ್ತಾಗಿ ನೆಡಲಾಗಿದೆ!?!?
ಬೆಂಡೆ ಗಿಡದ ರೀತಿಯಲ್ಲಿ ತೀರ ಒತ್ತೋತ್ತಾಗಿ ಬೃಹದಾಕಾರವಾಗಿ ಮರವಾಗಿ ಬೆಳೆಯಲಿರುವ ದೂಪದ ಸಸಿಗಳನ್ನು ನೆಟ್ಟಿರುವುದು ಯಾವ ಅನುಭವದ ಆಧಾರದಲ್ಲಿ ಎಂದು ತಿಳಿಯುತ್ತಿಲ್ಲ.
ಕೂಡಲೇ ಅರಣ್ಯ ಇಲಾಖೆಯವರು ಎಚ್ಚೆತ್ತು ಸುರಕ್ಷಿತ ಅಂತರದಲ್ಲಿ ಸಸಿಗಳು ಇರುವಂತ ನೋಡಿಕೊಂಡು ಬೇಸಿಗೆಯಲ್ಲಿ ಸಸಿಗಳಿಗೆ ನೀರುಣಿಸಿ ಪೋಷಣೆ ರಕ್ಷಣೆ ಮಾಡುವುದರ ಜೊತೆಗೆ ಬಹುಕಾಲ ನೆರಳು ಮತ್ತು ತಂಗಾಳಿಯನ್ನು ನೀಡಲಿರುವ ಸಾಲುಮರಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು.
ವೈವಿಧ್ಯಮಯ ಗಿಡ _ಮರಗಳು ಬೇಕು.ಒಂದೇ ಜಾತಿಯ ಹತ್ತಾರು ಗಿಡಗಳನ್ನು ಒತ್ತೋತ್ತಾಗಿ ಒಂದೇ ಸಾಲಿನಲ್ಲಿ ನೆಡುವುವುದಕ್ಕಿಂತ ವೈವಿಧ್ಯಮಯ ಹಣ್ಣುಗಳನ್ನು ನೀಡುವ ಹಾಗೂ ಪ್ರಯಾಣಿಕರಿಗೆ ವಿಫುಲವಾದ ನೆರಳು ಮತ್ತು ತಂಗಾಳಿಯನ್ನು ನೀಡುವ ವಿವಿಧ ಪ್ರಭೇದಗಳ ಗಿಡಗಳನ್ನು ನೆಟ್ಟಿದ್ದರೆ ಬಹುಪಯೋಗಿಯಾಗುತ್ತಿತ್ತು.
- ನಾಮಫಲಕಗಳನ್ನು ಸ್ಥಾಪಿಸಬೇಕು
ಯಾವ ಯೋಜನೆ ಅಡಿಯಲ್ಲಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಈ ಗಿಡಗಳನ್ನು ಪ್ರಾಯೋಗಿಕವಾಗಿ ನೆಡಲಾಗಿದೆ ಎನ್ನುವ ಬಗ್ಗೆ ನಾಮಫಲಕಗಳನ್ನು ಸ್ಥಾಪಿಸಬೇಕು ಎಂದು ಸಾಣೂರು ನಾಗರಿಕರ ಮತ್ತು ಪರಿಸರ ಪ್ರೇಮಿಗಳ ಆಗ್ರಹವಾಗಿದೆ ಎಂದು ಸಾಣೂರು ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರು ಹಾಗೂ ಸಾಣೂರು ಗ್ರಾಮ ಪಂಚಾಯತ್ನ ಮಾಜಿ ಅಧ್ಯಕ್ಷರಾದ ಸಾಣೂರು ನರಸಿಂಹ ಕಾಮತ್ ರವರು ತಿಳಿಸಿರುತ್ತಾರೆ.