ಮಂಗಳೂರು: ಏಪ್ರಿಲ್ 11:ನಗರದ ಹೊರವಲಯದ ಅಡ್ಯಾರ್ ನಲ್ಲಿರುವ ಐಸ್ ಕ್ರೀಂ ಘಟಕವೊಂದರಲ್ಲಿ ಎಳನೀರು ಸೇವಿಸಿದ ಆರೋಪದಲ್ಲಿ ಹಲವರು ಅಸ್ವಸ್ಥಗೊಂಡಿದ್ದಾರೆ.
ಅಡ್ಯಾರ್, ಕಣ್ಣೂರು ಮತ್ತು ತುಂಬೆ ನಿವಾಸಿಗಳು ಏಪ್ರಿಲ್ 8 ರಂದು ಎಳನೀರು ಖರೀದಿಸಿದ್ದರು ಮತ್ತು ಮರುದಿನ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಎಳನೀರು ಕುಡಿದ ಬಳಿಕ ಅವರಲ್ಲಿ ವಾಂತಿ ಮತ್ತು ಭೇದಿ ಆರಂಭವಾಗಿತ್ತು.
ಉಪವಾಸದ ಸಮಯದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಬೊಂಡ ನೀರನ್ನು ಖರೀದಿಸಿದ್ದು ಸಾಯಂಕಾಲದ ಹೊತ್ತಿಗೆ ಬೊಂಡಾ ನೀರಿಗಾಗಿ ಮುಗಿಬೀಳುತ್ತಿದ್ದರು, ಮತ್ತು ಇವರ ಬೇಡಿಕೆ ಪೂರೈಸಲು ಫ್ಯಾಕ್ಟರಿಯವರು ಬೆಳಿಗ್ಗಿನ ಹೊತ್ತು ಸಂಗ್ರಹಿಸಿದ ನೀರನ್ನು ಕೆಡದಂತೆ ಮಾಡಲು ಯಾವುದೋ ರಾಸಾಯನಿಕ ಬೆರೆಸುವ ಬಗ್ಗೆ ಗುಮಾನಿ ಇದೆ, ಮತ್ತು ಆ ರಾಸಾಯನಿಕದಿಂದಾಗಿಯೇ ಇವತ್ತು ಬೊಂಡಾ ನೀರು ಕುಡಿದ ಜನ ವಾಂತಿ ಬೇದಿಯಿಂದ ನರಳಿದ್ದಾರೆ ಎಂಬ ಸಂಶಯವಿದೆ.
ಅಡ್ಯಾರು ಪಂಚಾಯತಿಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಮಂಗಳೂರಿನ ಆಹಾರ ಇಲಾಖೆಯ ಅಧಿಕಾರಿಗಳು ಬೊಂಡಾ ಫ್ಯಾಕ್ಟರಿಗೆ ದಾಳಿ ನಡೆಸಿ ಬೊಂಡಾ ನೀರನ್ನು ಪರೀಶೀಲಿಸಿ, ತಪ್ಪು ಕಂಡು ಬಂದಲ್ಲಿ ಬೊಂಡಾ ಫ್ಯಾಕ್ಟರಿಯ ವಿರುಧ್ದ ಕ್ರಮ ಕೈಗೊಳ್ಳಬೇಕಾಗಿ ವಿನಂತಿ ಎಂಬ ವಾಟ್ಸಾಪ್ ಸಂದೇಶವೊಂದು ಹರಡಿತ್ತು.
ಅಸ್ವಸ್ಥರು ಮೊದಲಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ. ನಂತರ ನಗರದ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಮೂವರು ಒಳರೋಗಿಗಳಾಗಿ ದಾಖಲಾಗಿದ್ದರೆ, 12 ಮಂದಿ ತುಂಬೆ ಫಾದರ್ ಮುಲ್ಲರ್ ಆಸ್ಪತ್ರೆಯ ಹೊರರೋಗಿ ಘಟಕದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಬುಧವಾರ ವಾಟ್ಸ್ ಆ್ಯಪ್ ಮೂಲಕ ದೂರು ಸ್ವೀಕರಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಹಾಗೂ ಆಹಾರ ಭದ್ರತಾ ಅಧಿಕಾರಿ ಐಸ್ಕ್ರೀಂ ಘಟಕಕ್ಕೆ ಭೇಟಿ ನೀಡಿ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.
ವರದಿಗಾಗಿ ಕಾಯಲಾಗುತ್ತಿದೆ. ಇದರ ಬೆನ್ನಲ್ಲೇ ಇಡೀ ಕಾರ್ಖಾನೆಯನ್ನು ಬಂದ್ ಮಾಡಿ ಸ್ವಚ್ಛಗೊಳಿಸಲಾಗಿದೆ. ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನೂ ಅಧಿಕಾರಿಗಳು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಜತೆಗೆ, ಮಾಹಿತಿ ಪಡೆದರು