ಬೆಂಗಳೂರು:ಏಪ್ರಿಲ್ 10:ಮನುಷ್ಯರ ಮೇಲೆ ದಾಳಿ ಮಾಡುವಷ್ಟು ಅಪಾಯಕಾರಿಯಾಗಿರುವ 23 ತಳಿಗಳ ನಾಯಿಗಳ (Dog Breeds) ಸಾಕಣೆ, ಮಾರಾಟಕ್ಕೆ ನಿಷೇಧ ಹೇರಿದ್ದ ಕೇಂದ್ರ ಸರ್ಕಾರಕ್ಕೆ ಭಾರಿ ಹಿನ್ನಡೆಯಾಗಿದೆ. 23 ಅಪಾಯಕಾರಿ ಶ್ವಾನ ತಳಿಗಳ ನಿಷೇಧ ಹೇರಿದ್ದ ಕೇಂದ್ರ ಸರ್ಕಾರದ ಆದೇಶಕ್ಕೆ ಈಗ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಕೇಂದ್ರದ ಆದೇಶವನ್ನು ರದ್ದುಗೊಳಿಸಿ ರಾಜ್ಯ ಹೈಕೋರ್ಟ್ ಆದೇಶ ಹೊರಡಿಸಿದೆ
ಕೇಂದ್ರ ಸರ್ಕಾರದ ಆದೇಶ ಪ್ರಶ್ನಿಸಿ ಶ್ವಾನಗಳ ಟ್ರೇನರ್ ಆಗಿರುವ ಕಿಂಗ್ ಸೋಲೊಮೊನ್ ಡೇವಿಡ್ ಹಾಗೂ ಇನ್ನೊಬ್ಬರು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು, ಕೇಂದ್ರ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ಅದರಲ್ಲೂ ವಿಶೇಷವಾಗಿ, ಕೇಂದ್ರ ಸರ್ಕಾರದ ಆದೇಶವು ಕರ್ನಾಟಕದಲ್ಲಿ ಜಾರಿಯಾಗುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿತು. “ಈ ತಳಿಯ ಶ್ವಾನಗಳ ಸಾಕಣೆ ಮಾಡುವವರು, ತಜ್ಞರ ಜತೆ ಸಮಾಲೋಚಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಬೇಕಿತ್ತು” ಎಂದು ಕೂಡ ತಿಳಿಸಿತು.
ಕೇಂದ್ರದ ಆದೇಶ ಏನಾಗಿತ್ತು?
ಕೇಂದ್ರ ಸರ್ಕಾರವು 23 ತಳಿಗಳ ಶ್ವಾನಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದು, ಅವುಗಳನ್ನು ಸಾಕುವುದು, ಮಾರಾಟ ಮಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಪಶು ಸಂಗೋಪನೆ ಇಲಾಖೆಯ ತಜ್ಞರ ಸಮಿತಿಯ ವರದಿ ಮತ್ತು ಪ್ರಾಣಿ ದಯಾ ಸಂಘ ‘ಪೆಟಾ’ದ ಮನವಿ ಮೇರೆಗೆ ಕೇಂದ್ರ ಸರ್ಕಾರವು ಮಾರ್ಚ್ 13ರಂದು ಆದೇಶ ಹೊರಡಿಸಿತ್ತು. ಮನುಷ್ಯರ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡುವ, ಮನುಷ್ಯರಿಗೆ ತುಂಬ ಅಪಾಯಕಾರಿಯಾಗಿರುವ ಕಾರಣದಿಂದಾಗಿ ಈ ತಳಿಗಳ ಶ್ವಾನಗಳನ್ನು ನಿಷೇಧಿಸಿತ್ತು.
ಯಾವ ತಳಿಗಳಿಗೆ ನಿರ್ಬಂಧ ವಿಧಿಸಿತ್ತು?
ಪಿಟ್‌ಬುಲ್ ಟೆರಿಯರ್, ಟೋಸಾ ಇನು, ಅಮೆರಿಕನ್ ಸ್ಟೆಫರ್ಡ್‌ಶೈರ್ ಟೆರಿಯರ್, ಫಿಲಾ ಬ್ರೇಸಿಲೈರೋ, ಡೋಗೊ ಅರ್ಜೆಂಟಿನೋ, ಅಮೆರಿಕನ್ ಬುಲ್‌ಡಾಗ್, ಬೋರ್ಬೊಯೆಲ್, ಕಂಗಲ್, ಸೆಂಟ್ರಲ್ ಏಷ್ಯನ್ ಶೀಪ್‌ಡಾಗ್, ಕೌಕಾಸಿಯನ್ ಶೆಫರ್ಡ್ ಡಾಗ್, ಸೌತ್ ರಷ್ಯನ್ ಶೆಫರ್ಡ್ ಡಾಗ್, ಟಾರ್ನ್‌ಜಾಕ್, ಜಪಾನೀಸ್ ಟೋಸಾ, ಮಾಸ್ಟಿಫ್, ವೂಲ್ಫ್ ಡಾಗ್ಸ್, ಬ್ಯಾನ್‌ಡಾಗ್ ಸೇರಿ 23 ತಳಿಗಳ ಶ್ವಾನಗಳ ಸಾಕಣೆ, ಮಾರಾಟವನ್ನು ಕೇಂದ್ರ ಸರ್ಕಾರ ನಿಷೇಧಿಸಿತ್ತು. ಈ ಕುರಿತು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ಹೊರಡಿಸಿತ್ತು.