ಕುಂದಾಪುರ: ಏಪ್ರಿಲ್ 09: ಹೆದ್ದಾರಿ 66ರ ಕೆಎಸ್‌ಆರ್‌ಟಿಸಿ ಡಿಪೋ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಇನ್ನೋವಾ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಢಿಕ್ಕಿ ಹೊಡೆದು ಪಲ್ಟಿಯಾಗಿ ಓರ್ವ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಭೀಕರ ಅವಘಡ ಸಂಭವಿಸಿದೆ.
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ದರ್ಶನ ಮುಗಿಸಿ ಪಾಂಡಿಚೇರಿಗೆ ಮರಳುತ್ತಿದ್ದ ಕಾರಿನಲ್ಲಿ ಮೂವರು ಪ್ರಯಾಣಿಕರಿದ್ದರು.
ಢಿಕ್ಕಿಯ ರಭಸಕ್ಕೆ ಕಬ್ಬಿಣದ ಗ್ರಿಲ್‌ಗಳಿಗೂ ಹಾನಿಯಾಗಿದ್ದು, ಗಾಯಾಳುಗಳ ಸ್ಥಿತಿಯೂ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಅವಘಡ ನಡೆದ ವೇಳೆ ಅದೃಷ್ಟವಶಾತ್ ರಸ್ತೆಯಲ್ಲಿ ಹೆಚ್ಚಿನ ವಾಹನಗಳು ಸಂಚರಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ದೌಡಾಯಿಸಿದ ಕುಂದಾಪುರ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ ಸಂಚಾರ ಸುಗಮವಾಗಲು ಅನುವು ಮಾಡಿಕೊಟ್ಟರು. ರಕ್ಷಣ ಕಾರ್ಯ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ನೆರವಾದರು.ಮೃತ ಮತ್ತು ಗಾಯಾಳುಗಳ ವಿವರ ಇನ್ನಷ್ಟೇ ತಿಳಿದು ಬರಬೇಕಿದೆ.