ಮಣಿಪಾಲ, 05 ಏಪ್ರಿಲ್ 2024:ಮತದಾರರ ಜಾಗೃತಿ ಮತ್ತು ನಾಗರಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಸಂಘಟಿತ ಪ್ರಯತ್ನದಲ್ಲಿ, ಭಾರತ ಚುನಾವಣಾ ಆಯೋಗವು ಉಡುಪಿ ಜಿಲ್ಲಾಡಳಿತ, ಸ್ವೀಪ್ ಸಮಿತಿ ಮತ್ತು ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಉಡುಪಿ ಜಿಲ್ಲೆ, ಆಸರೆ ವಿಶೇಷ ಶಾಲೆ , ಮಣಿಪಾಲವು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಆಶ್ರಯದಲ್ಲಿ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಆಯೋಜಿಸಿತ್ತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಶ್ರೀ ಪ್ರತೀಕ್ ಬಾಯಲ್ ಅವರು ಮಾತನಾಡಿ, ಮತದಾನ ಕೇವಲ ಹಕ್ಕು ಅಲ್ಲ ಎಲ್ಲರ ಜವಾಬ್ದಾರಿ ಕೂಡ ಹೌದು ಎಂದು ಒತ್ತಿ ಹೇಳಿದರು. ಮತದಾನದ ರಜೆ ಮೋಜು ಮಸ್ತಿಗೆ ಅಲ್ಲ, ಇದನ್ನು ಸದುಪಯೋಗ ಪಡಿಸಿಕೊಂಡು ಮತದಾನ ಮಾಡಿ ಎಂದರು. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಅವರು ಮತದಾರರ ಜಾಗೃತಿಯನ್ನು ಬೆಳೆಸುವಲ್ಲಿ ಜಿಲ್ಲಾಡಳಿತದ ಪೂರ್ವಭಾವಿ ಪ್ರಯತ್ನಗಳನ್ನು ಶ್ಲಾಘಿಸಿದರು, ಪ್ರಜಾಪ್ರಭುತ್ವವನ್ನು ಬಲಪಡಿಸುವಲ್ಲಿ ಇಂತಹ ಉಪಕ್ರಮಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದರು.
ಕಾರ್ಯಕ್ರಮದಲ್ಲಿ ಮತದಾನದ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಆಕರ್ಷಕ ಯಕ್ಷಗಾನ ಪ್ರದರ್ಶನದೊಂದಿಗೆ ಸಾಂಸ್ಕೃತಿಕ ವೈಭವವನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ರತ್ನ ಸುವರ್ಣ, ಸ್ವೀಪ್ ಸಮಿತಿಯ ಅನುರಾಧ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಚುನಾವಣಾ ಜಾಗೃತಿ ಭಿತ್ತಿ ಪತ್ರದೊಂದಿಗೆ ಆಸರೆ ವಿಶೇಷ ಶಾಲೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನಾ ಅಧಿಕಾರಿ ಶ್ರೀ ಶಿವಾಜಿಯವರ ಮಾರ್ಗದರ್ಶನದಲ್ಲಿ ಉಪಸ್ಥಿತರಿದ್ದವರು
ಚುನಾವಣಾ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯುವುದಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ಮ್ಯಾನೇಜರ್ ಶ್ರೀ ಮೋಹನ್ ಶೆಟ್ಟಿ ಸ್ವಾಗತಿಸಿದರು, ಆಸರೆ ಅಧ್ಯಕ್ಷರಾದ ಶ್ರೀ ಜೈ ವಿಟ್ಟಲ್ ವಂದಿಸಿದರು, ಶಿಕ್ಷಕ ಶ್ರೀ ರಮೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು .