ಸಾಣೂರು:ಏಪ್ರಿಲ್ 03:ಸಾಣೂರು ರಾಷ್ಟ್ರೀಯ ಹೆದ್ದಾರಿ 169 ಮುರತಂಗಡಿ ಬಳಿ ಪೈಪ್ ಲೈನ್ ಒಡೆದು ಕಳೆದ ನಾಲ್ಕೈದು ದಿನಗಳಿಂದ ನೀರು ಅನವಶ್ಯಕವಾಗಿ ಪೋಲಾಗುತ್ತಿತ್ತು.
ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಡಿಯೋ ಮತ್ತು ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ಕಂಪನಿ ದಿಲೀಪ್ ಬಿಲ್ಡ್ ಕಾನ್ ರವರ ಬೇಜವಾಬ್ದಾರಿತನದ ಬಗ್ಗೆ ಆಕ್ರೋಶ ವ್ಯಕ್ತವಾದ ಕೂಡಲೇ ಸ್ಥಳೀಯ ರಿಜೆನ್ಸಿ ಹಾಲ್ ನ ಮಾಲಕರಾದ ಶ್ರೀ ರಮೇಶ್ ಸಾಲ್ಯಾನ್ ರವರು ತಮ್ಮ ನೀರು ಸಂಪರ್ಕದ ಪೈಪ್ ಲೈನ್ ನ್ನು ಬೆಳಿಗ್ಗೆ 7:00 ಒಳಗಾಗಿ ದುರಸ್ತಿ ಪಡಿಸಿರುವುದರಿಂದ, ಇದೀಗ ಧಾರಾಕಾರವಾಗಿ ನೀರು ಪೋಲಾಗುವುದು ನಿಂತಿರುತ್ತದೆ.
ಕುಡಿಯುವ ನೀರಿನ ಮುಖ್ಯ ಪೈಪ್ ಲೈನ್ ಕೂಡ ಕೆಲವು ಕಡೆ ಒಡೆದು ಹೋಗಿದ್ದು, ಹೆದ್ದಾರಿ ಗುತ್ತಿಗೆದಾರ ಕಂಪನಿಯವರು ತಾತ್ಕಾಲಿಕವಾಗಿ ರಬ್ಬರ್ ಟ್ಯೂಬ್ ಕಟ್ಟಿ ಸರಿಪಡಿಸಿದರು ನೀರು ವ್ಯರ್ಥವಾಗಿ ಹೊರಗೆ ಹರಿಯುತ್ತಿದೆ.
ಈಗಾಗಲೇ ಪಂಚಾಯತ್ ಮತ್ತು ಸ್ಥಳೀಯ ನಾಗರಿಕರು ಗುತ್ತಿಗೆದಾರ ಕಂಪನಿಯ ಕನ್ಸ್ಟ್ರಕ್ಷನ್ ಮ್ಯಾನೇಜರ್ರವರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿರುತ್ತಾರೆ.
ಕುಡಿಯುವ ನೀರಿನ ಮುಖ್ಯ ಪೈಪ್ ಲೈನ್ ಅನ್ನು ಭೂಮಿಯ ಅಡಿಗೆ ಹಾಕದೆ ರಸ್ತೆಯ ಪಕ್ಕದಲ್ಲಿ ಮೇಲ್ಭಾಗದಲ್ಲಿಯೇ ಅಳವಡಿಸಿರುವುದರಿಂದ, ನಡೆದಾಡುವ ಜನರ ಕಾಲಿಗೆ, ವಾಹನಗಳಿಗೆ ಸಿಕ್ಕಿ ಆಗಾಗ ಪೈಪ್ ಲೈನ್ ಹಾಳಾಗುತ್ತಿದೆ.
ರಸ್ತೆ ನಿರ್ಮಾಣಕ್ಕೆ ಕೊಡುವ ಆದ್ಯತೆಯನ್ನು ಗುತ್ತಿಗೆದಾರ ಕಂಪನಿಯವರು ಸ್ಥಳೀಯ ನಾಗರಕರ ಕುಡಿಯುವ ನೀರಿನ ಪೈಪ್ ಲೈನ್ ಅನ್ನು ಜೋಪಾನ ಮಾಡುವಲ್ಲಿ ತೋರಿಸದೆ ಇರುವುದರಿಂದ, ಆಗಾಗ ಪೈಪ್ ಲೈನ್ ಒಡೆದು ನೀರು ವ್ಯರ್ಥವಾಗಿ ಹೊರಗೆ ಹೋಗಿ ಸ್ಥಳೀಯ ನಾಗರೀಕರು ದಿಲೀಪ್ ಬಿಲ್ಡ್ ಖಾನ್ ಕಂಪನಿಯವರಿಗೆ ಶಾಪ ಹಾಕುತ್ತಿದ್ದಾರೆ ಎಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ತಿಳಿಸಿರುತ್ತಾರೆ
ಸ್ಥಳೀಯ ನಾಗರೀಕರ ಸಹನೆಯ ಕಟ್ಟೆ ಒಡೆದು, ಹೆದ್ದಾರಿ ಕಾಮಗಾರಿಯನ್ನು ರಸ್ತೆಗಳಿದು ನಿಲ್ಲಿಸುವ ಪರಿಸ್ಥಿತಿ ಬರುವ ಮೊದಲು ಸ್ಥಳೀಯ ಪಂಚಾಯತ್ ಆಡಳಿತ ಮತ್ತು ಗುತ್ತಿಗೆದಾರ ಕಂಪನಿ ಎಚ್ಚೆತ್ತು ಕೂಡಲೇ ನೀರಿನ ಪೈಪ್ ಲೈನ್ ಅನ್ನು ಸರಿಪಡಿಸಿ ಶಾಶ್ವತ ಪರಿಹಾರ ಒದಗಿಸುವುದು ಉತ್ತಮ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ ಎಂದು ಹೆದ್ದಾರಿ ಹೋರಾಟ ಸಮಿತಿಯ ಪ್ರಮುಖರಾದ ಸಾಣೂರು ನರಸಿಂಹ ಕಾಮತ್ ರವರು ತಿಳಿಸಿರುತ್ತಾರೆ.