ಉಡುಪಿ :ಮಾರ್ಚ್ 30: ಬಾಡಿಗೆಗೆ ಹೋಗಲಿಕ್ಕೆ ಇದೆ ಎಂದು ಮನೆಯಿಂದ ಹೋದ ಆಟೋರಿಕ್ಷಾ ಚಾಲಕ ಮೂಡುತೋನ್ಸೆ ಗ್ರಾಮದ ಮಹಮ್ಮದ್ ಫೈಜಲ್ (36) ಮಾ. 27ರ ರಾತ್ರಿಯಿಂದ ನಾಪತ್ತೆಯಾಗಿರುವ ಬಗ್ಗೆ ಮಲ್ಪೆ ಠಾಣೆಯಲ್ಲಿ ದೂರು ದಾಖಲಾಗಿದೆ.
ತಡರಾತ್ರಿಯಾದರೂ ಮನೆಗೆ ಬಾರದ್ದನ್ನು ಕಂಡು ಪತ್ನಿ ಫೈಜಲ್ ಅವರ ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ಆಫ್ ಬರುತ್ತಿತ್ತು. ಅವರ ಆಟೋರಿಕ್ಷಾ ಮನೆ ಬಳಿಯ ಮೈದಾನದ ಬಳಿ ನಿಲ್ಲಿಸಿರುವುದು ಪತ್ತೆಯಾಗಿದೆ. ಫೈಜಲ್ ಅವರು ಆಟೋರಿಕ್ಷಾ ಚಾಲಕ ವೃತ್ತಿಯ ಜತೆಗೆ ಟೈಲ್ಸ್ ಜೋಡಿಸುವ ಕೆಲಸವನ್ನೂ ಸಹ ಮಾಡಿಕೊಂಡಿದ್ದರು.
ಕಾಣೆಯಾದ ವ್ಯಕ್ತಿಯ ಎತ್ತರ 5.5 ಅಡಿ ಎತ್ತರ, ಗೋದಿ ಮೈಬಣ್ಣ, ಕನ್ನಡ, ತುಳು, ಹಿಂದಿ ಭಾಷೆ ಬಲ್ಲವರಾಗಿದ್ದಾರೆ. ಅವರ ಸುಳಿವು ಸಿಕ್ಕವರು ಮಲ್ಪೆ ಠಾಣೆಗೆ ಮಾಹಿತಿಯನ್ನು ನೀಡುವಂತೆ ಕೋರಲಾಗಿದೆ.