ನವದೆಹಲಿ :ಮಾರ್ಚ್ 29:ಮದ್ಯ ಹಗರಣ ಪ್ರಕರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಸಂಕಷ್ಟಗಳು ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಗುರುವಾರ ನ್ಯಾಯಾಲಯ ಅರವಿಂದ್ ಕೇಜ್ರಿವಾಲ್ ಅವರ ಇಡಿ ಕಸ್ಟಡಿಯನ್ನು ಏಪ್ರಿಲ್ 1 ರವರೆಗೆ ವಿಸ್ತರಿಸಿದೆ. ಇದರ ನಡುವೆ ಅರವಿಂದ್ ಕೇಜ್ರಿವಾಲ್ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ ಜಾರಿ ನಿರ್ದೇಶನಾಲಯ (ಇಡಿ) ಬಂಧನದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಬೆಂಬಲಿಸುವಂತೆ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಅವರು ಇಂದು ವಾಟ್ಸಾಪ್ ಅಭಿಯಾನವೊಂದನ್ನು ಆರಂಭಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುನೀತಾ ಬಂಧನದಲ್ಲಿರುವ ತನ್ನ ಪತಿಯ ಬೆಂಬಲಕ್ಕಾಗಿ ವಾಟ್ಸಾಪ್ ಮೂಲಕ “ಕೇಜ್ರಿವಾಲ್ ಕೋ ಆಶೀರ್ವಾದ್ (ಕೇಜ್ರಿವಾಲ್ ಅವರನ್ನು ಆಶೀರ್ವದಿಸಿ)” ಎಂಬ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಈ ಅಭಿಯಾನ ಮೂಲಕ ಜೈಲಿನಲ್ಲಿರುವ ತನ್ನ ಪತಿಗೆ ಆಶೀರ್ವಾದ ಮತ್ತು ಶುಭಾಶಯಗಳನ್ನು ಕಳುಹಿಸುವಂತೆ ಒತ್ತಾಯಿಸಿದ್ದಾರೆ.
ಅದರಂತೆ ವಾಟ್ಸಾಪ್ ಸಂಖ್ಯೆ 8297324624 ಈ ನಂಬರ್ ಗೆ ನೀವು ನಿಮ್ಮ ಸಂದೇಶವನ್ನು ಕಳುಹಿಸುವಂತೆ ಕೇಳಿಕೊಂಡಿದ್ದು ಅಷ್ಟು ಮಾತ್ರವಲ್ಲದೆ ನೀವು ಕಳುಹಿಸುವ ಪ್ರತಿಯೊಂದು ಸಂದೇಶವನ್ನು ಕೇಜ್ರಿವಾಲ್ ಅವರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಮಾರ್ಚ್ ೨೧ ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.