ಮಾರ್ಚ್ 25 : ತಮಿಳುನಾಡಿನ ಈರೋಡ್ ಕ್ಷೇತ್ರದ ಹಾಲಿ ಲೋಕಸಭಾ ಸಂಸದ ಡಿಎಂಕೆಯ ಎ.ಗಣೇಶಮೂರ್ತಿ ಅವರು ಕೀಟನಾಶಕ(Pesticide) ಸೇವಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಡಿಎಂಕೆ ಟಿಕೆಟ್‌ನಲ್ಲಿ ಚುನಾಯಿತರಾದ ಗಣೇಶಮೂರ್ತಿ ಆರೋಗ್ಯ ಏಕಾಏಕಿ ಹದಗಟ್ಟಿತ್ತು, ಬಳಿಕ ಆಸ್ಪತ್ರೆಗೆ ದಾಖಲಿಸಿದಾಗ ಅವರು ಕೀಟನಾಶಕ ಸೇವಿಸಿದ್ದು ತಿಳಿದುಬಂದಿದೆ. ತಪಾಸಣೆಯ ನಂತರ ಅವರನ್ನು ಐಸಿಯುಗೆ ದಾಖಲಿಸಲಾಗಿದ್ದು, ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಇಬ್ಬರು ವೈದ್ಯರು ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಮಧ್ಯಾಹ್ನ 2.30 ರ ಸುಮಾರಿಗೆ ಕೊಯಮತ್ತೂರಿನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಡಿಎಂಕೆ ನಾಯಕ ದುರೈ ವೈಕೋ ಆಸ್ಪತ್ರೆಗೆ ಭೇಟಿ ನೀಡಿದ್ದು, ಗಣೇಶಮೂರ್ತಿ ಅವರ ಸ್ಥಿತಿ ಚಿಂತಾಜನಕವಾಗಿದ್ದು, ಇಸಿಎಂಒ ಚಿಕಿತ್ಸೆಯಲ್ಲಿದೆ ಎಂದು ಹೇಳಿದ್ದಾರೆ.
ಸಚಿವ ಎಸ್.ಮುತ್ತುಸಾಮಿ, ಮೊಡಕುರಿಚಿಯ ಬಿಜೆಪಿ ಶಾಸಕ ಡಾ.ಸಿ.ಸರಸ್ವತಿ, ಎಐಎಡಿಎಂಕೆಯ ಕೆ.ವಿ.ರಾಮಲಿಂಗಂ ಮುಂತಾದ ರಾಜಕೀಯ ಮುಖಂಡರು ಆಸ್ಪತ್ರೆಗೆ ಧಾವಿಸಿ ಗಣೇಶಮೂರ್ತಿ ಅವರ ಆರೋಗ್ಯ ವಿಚಾರಿಸಿದರು. ಅವರ ಈ ನಿರ್ಧಾರಕ್ಕೆ ಕಾರಣವೇನೆಂಬುದು ತಿಳಿದುಬಂದಿಲ್ಲ.