ನವದೆಹಲಿ:ಮಾರ್ಚ್ 20:ಏಪ್ರಿಲ್ 1ರಿಂದ ಸುಮಾರು 800 ಅಗತ್ಯ ಔಷಧ (Essential Drugs)ಗಳ ಬೆಲೆಯಲ್ಲಿ ಹೆಚ್ಚಳವಾಗಲಿದೆ. ಸಗಟು ಬೆಲೆ ಸೂಚ್ಯಂಕ (Wholesale Price Index) ಅಂಕಿಅಂಶಗಳ ಆಧಾರದ ಮೇಲೆ ನೋವು ನಿವಾರಕಗಳು, ಆ್ಯಂಟಿಬಯಾಟಿಕ್ಸ್ ಮತ್ತು ಸೋಂಕು ನಿವಾರಕಗಳು ಸೇರಿದಂತೆ ಅಗತ್ಯ ಔಷಧಗಳ ಬೆಲೆಗಳು ಅಲ್ಪ ಏರಿಕೆ ಕಾಣಲಿವೆ ಎಂದು ಮೂಲಗಳು ತಿಳಿಸಿವೆ.
ಅಗತ್ಯ ಔಷಧಗಳ ಪಟ್ಟಿಯಲ್ಲಿ ಪ್ಯಾರಸಿಟಮಾಲ್‌ನಂತಹ ಮಾತ್ರೆಗಳು, ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸುವ ಅಜಿಥ್ರೊಮೈಸಿನ್‌ನಂತಹ ಆ್ಯಂಟಿಬಯಾಟಿಕ್ಸ್, ರಕ್ತಹೀನತೆ ವಿರೋಧಿ ಔಷಧಗಳು, ಜೀವಸತ್ವಗಳು ಮತ್ತು ಖನಿಜಗಳು ಸೇರಿವೆ. ಜತೆಗೆ ಮಧ್ಯಮದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗುವ ಕೋವಿಡ್ -19 ರೋಗಿಗಳ ಚಿಕಿತ್ಸೆಗೆ ಬಳಸುವ ಕೆಲವು ಔಷಧಗಳು ಮತ್ತು ಸ್ಟೀರಾಯ್ಡ್‌ಗಳು ಸಹ ಪಟ್ಟಿಯಲ್ಲಿವೆ.
ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿ (National List of Essential Medicines)ಯ ಅಡಿಯಲ್ಲಿ ಬರುವ ಔಷಧಗಳ ಬೆಲೆಯಲ್ಲಿ .0055% ಹೆಚ್ಚಳಕ್ಕೆ ಸರ್ಕಾರ ಅನುಮತಿ ನೀಡಲು ಸಜ್ಜಾಗಿದೆ. ಕಳೆದ ವರ್ಷ ಮತ್ತು 2022ರಲ್ಲಿ ಈ ಔಷಧಗಳ ಬೆಲೆಗಳಲ್ಲಿ 12% ಮತ್ತು 10%ದಷ್ಟು ಭಾರಿ ಹೆಚ್ಚಳದ ನಂತರ ಮತ್ತೊಮ್ಮೆ ದರ ಹೆಚ್ಚಿಸಲಾಗುತ್ತಿದೆ. ನಿಗದಿತ ಔಷಧಗಳ ಬೆಲೆಗಳ ಬದಲಾವಣೆಯನ್ನು ವರ್ಷಕ್ಕೊಮ್ಮೆ ಅನುಮತಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ಮಾಹಿತಿ ನೀಡಿವ
ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಔಷಧ ತಯಾರಕರು ದರ ವೃದ್ಧಿಸಲು ಆಗ್ರಹಿಸುತ್ತಿದ್ದಾರೆ. ಉದ್ಯಮದ ತಜ್ಞರ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ ಕೆಲವು ಪ್ರಮುಖ ಔಷಧೀಯ ಪದಾರ್ಥಗಳ ಬೆಲೆಗಳು 15% ಮತ್ತು 130% ನಡುವೆ ಹೆಚ್ಚಾಗಿದೆ. ಜತೆಗೆ ಪ್ಯಾರಸಿಟಮಾಲ್ ಬೆಲೆ 130% ಮತ್ತು ಎಕ್ಸಿಪಿಯೆಂಟ್‌ಗಳ ಬೆಲೆ 18-262% ಹೆಚ್ಚಾಗಿದೆ.
ಗ್ಲಿಸರಿನ್ ಮತ್ತು ಪ್ರೊಪಿಲೀನ್ ಗ್ಲೈಕಾಲ್, ಸಿರಪ್‌ಗಳು ಸೇರಿದಂತೆ ಪ್ರತಿ ಔಷಧ ತಯಾರಿಕೆಯಲ್ಲಿ ಬಳಸುವ ದ್ರಾವಕಗಳು ಕ್ರಮವಾಗಿ 263% ಮತ್ತು 83%ದಷ್ಟು ದುಬಾರಿಯಾಗಿವೆ. ಮಧ್ಯವರ್ತಿಗಳ ಬೆಲೆಗಳು ಸಹ 11% ಮತ್ತು 175% ನಡುವೆ ಹೆಚ್ಚಾಗಿದೆ. ಪೆನ್ಸಿಲಿನ್ ಜಿ 175% ದುಬಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಅಗತ್ಯ ಔಷಧಗಳು ಮತ್ತು ಜೀವರಕ್ಷಕ ಔಷಧಗಳ ಬೆಲೆ ಕಳೆದ ವರ್ಷ 12.12%ದಷ್ಟು ಏರಿಕೆಯಾಗಿತ್ತು. ಆರ್ಥಿಕ ಸಲಹೆಗಾರರ ಕಚೇರಿ, ಆಂತರಿಕ ವ್ಯಾಪಾರ ಪ್ರಚಾರ ಇಲಾಖೆ ಹಾಗೂ ವಾಣಿಜ್ಯ ಮತ್ತು ಉದ್ಯಮ ಸಚಿವಾಲಯ ನೀಡಿದ ದತ್ತಾಂಶದ ಆಧಾರವಾಗಿ ಪ್ರತಿವರ್ಷ ಸಗಟು ಬೆಲೆ ಸೂಚ್ಯಂಕವನ್ನು ‘ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ’ ಪರಿಷ್ಕರಿಸುತ್ತದೆ.
‘ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ’ ಬೆಲೆ ನಿಯಂತ್ರಿಸುವ 800 ಔಷಧಗಳನ್ನು ಶೆಡ್ಯೂಲ್ಡ್ ಡ್ರಗ್ಸ್ ಎಂದು ವರ್ಗೀಕರಿಸಲಾಗುತ್ತದೆ. ನಾನ್ ಶೆಡ್ಯೂಲ್ಡ್ ಔಷಧಗಳ ಬೆಲೆಗಳು ಪ್ರಾಧಿಕಾರದ ನಿಯಂತ್ರಣದಲ್ಲಿರುವುದಿಲ್ಲ. ಅವುಗಳ ಬೆಲೆಯನ್ನು ವಾರ್ಷಿಕ ಗರಿಷ್ಠ 10%ದಷ್ಟು ಹೆಚ್ಚಿಸಲು ಅವಕಾಶವಿದೆ.