ಕಾರ್ಕಳ :ಮಾರ್ಚ್ 07:ಮನೋಹರ ಪ್ರಸಾದ್ ಅವರು ಮಾನವೀಯ ಸ್ಪಂದನೆಯ ಚತುರ್ಮುಖ ಪ್ರತಿಭೆ ಆಗಿದ್ದರು. ಅವರು ಸಾಹಿತ್ಯ, ಭಾಷಣ, ಬರವಣಿಗೆ ಮತ್ತು ಪತ್ರಿಕಾರಂಗ ಈ ನಾಲ್ಕೂ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು ತನ್ನ ಮಾನವೀಯ ಸ್ಪಂದನೆಯ ಮೂಲಕ. ಅವರೊಬ್ಬ ಅಭಿಜಾತ ಪ್ರತಿಭೆ. ಇಂದು ಸ್ಪರ್ಧಾತ್ಮಕವಾಗಿರುವ ಪತ್ರಿಕಾರಂಗದಲ್ಲಿ ಕೂಡ ಅವರಿಗೆ ಶತ್ರುಗಳು ಇರಲಿಲ್ಲ. ಅವರು ಯಾವ ಇಸಂಗೂ ಶರಣಾಗಲೇ ಇಲ್ಲ. ಅದರಿಂದ ಅವರು ಲೆಜೆಂಡ್ ಆದರು ಎಂದು ವಿಕಸನ ತರಬೇತುದಾರ ರಾಜೇಂದ್ರ ಭಟ್ ಕೆ ಅವರು ಹೇಳಿದರು.
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮತ್ತು ಕಾರ್ಯನಿರತ ಪತ್ರಕರ್ತರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಹೋಟೆಲ್ ಪ್ರಕಾಶದ ಸಂಭ್ರಮ ಸಭಾಂಗಣದಲ್ಲಿ ನಡೆದ ಪತ್ರಕರ್ತ, ಸಾಹಿತಿ, ವಾಗ್ಮಿ ಮನೋಹರ್ ಪ್ರಸಾದ್ ಅವರ ಸಾರ್ವಜನಿಕ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಸಂಸ್ಮರಣ ಭಾಷಣವನ್ನು ಮಾಡುತ್ತಿದ್ದರು. ಕಸಾಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ಅವರು ಮಾತಾಡಿ ಕಾರ್ಕಳ ತಾಲೂಕಿನ 17ನೆಯ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಮೆರೆದ ಮನೋಹರ ಪ್ರಸಾದ್ ಅವರ ಅಗಾಧವಾದ ವ್ಯಕ್ತಿತ್ವಕ್ಕೆ ನಾವೆಲ್ಲರೂ ತಲೆಬಾಗಿದ್ದೇವೆ ಎಂದರು.
ಕಾರ್ಕಳ ಕ್ರಿಯೇಟಿವ್ ಕಾಲೇಜಿನ ಸ್ಥಾಪಕರಲ್ಲಿ ಓರ್ವರಾದ ಅಶ್ವತ್ ಅವರು ದೀಪ ಬೆಳಗಿಸಿ ಈ ಕಾರ್ಯಕ್ರಮ ಉದ್ಘಾಟನೆ ಮಾಡಿದರು. ಅವರು ಮಾತಾಡಿ ಮನೋಹರ್ ಪ್ರಸಾದ್ ಅವರು ಏರಿದ ಎತ್ತರವು ಅಸಾಮಾನ್ಯ ಆದದ್ದು. ಅದರ ಹಿಂದೆ ಅವರ ಅಪಾರ ಪರಿಶ್ರಮ ಇದೆ ಎಂದು ಹೇಳಿದರು.
ಕವಿ ಮತ್ತು ಅಂಕಣಕಾರರಾದ ಜ್ಯೋತಿ ಗುರುಪ್ರಸಾದ್ ಅವರು ಮನೋಹರ್ ಪ್ರಸಾದ್ ಅವರ ಸೃಜನಶೀಲ ಸಾಹಿತ್ಯ ಸೇವೆಯ ಬಗ್ಗೆ ಮಾತಾಡಿದರು. ಎಸ್ ವಿ ಟಿ ಪದವಿ ಕಾಲೇಜಿನ ವಿಶ್ರಾಂತ ಪ್ರಾಚಾರ್ಯರಾದ ಮಿತ್ರಪ್ರಭಾ ಹೆಗ್ಡೆ, ಕಾರ್ಕಳ ತಾಲೂಕಿನ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ, ಶಿಕ್ಷಕಿ ಶೈಲಜಾ ಹೆಗ್ಡೆ, ಮನೋಹರ್ ಪ್ರಸಾದ್ ಅವರ ನಿಕಟ ಒಡನಾಡಿ ಮಾಧವ ಸುವರ್ಣ, ಸಂಬಂಧಿಕರಾದ ಲಕ್ಷ್ಮೀಕಾಂತ್ ರಾವ್, ಹರಿಶ್ಚಂದ್ರ ರಾವ್ ಮೊದಲಾದವರು ಮಾತಾಡಿ ನುಡಿ ನಮನ ಸಲ್ಲಿಸಿದರು. ಅಗಲಿದ ಆತ್ಮಕ್ಕೆ ಕಾರ್ಯಕ್ರಮದಲ್ಲಿ ಮೌನ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.
ಧಾರಿಣಿ ಉಪಾಧ್ಯಾಯ ಪ್ರಾರ್ಥನೆ ಸಲ್ಲಿಸಿದರು. ಸಾಹಿತ್ಯ ಪರಿಷದ್ ತಾಲೂಕು ಕಾರ್ಯದರ್ಶಿ ದೇವದಾಸ್ ಕೆರೆಮನೆ ಸ್ವಾಗತ ಮಾಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮೊಹಮದ್ ಷರೀಫ್ ಅವರು ಧನ್ಯವಾದ ನೀಡಿದರು. ಶಿಕ್ಷಕ ಗಣೇಶ್ ಜಾಲ್ಸೂರು ಅವರು ಕಾರ್ಯಕ್ರಮ ನಿರ್ವಹಣೆ ಮಾಡಿದರು. ಮನೋಹರ ಪ್ರಸಾದ್ ಅವರ ಅಪಾರ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪಾರ್ಚನೆ ಮಾಡಿದರು.