ಮಣಿಪಾಲ 04 ಮಾರ್ಚ್ 2024: ಆತ್ರಾಡಿ ಗ್ರಾಮ ಪಂಚಾಯತ್ ಇವರ ಆಶ್ರಯದಲ್ಲಿ ಮೂತ್ರಪಿಂಡ ಶಾಸ್ತ್ರ ವಿಭಾಗ , ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ರೀನಲ್ ರಿಪ್ಲೇಸ್ಮೆಂಟ್ ಥೆರಪಿ ಹಾಗೂ ಡಯಾಲಿಸಿಸ್ ಟೆಕ್ನೋಲೊಜಿ , ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ಸ್ , ಮಾಹೆ ಮಣಿಪಾಲ ಇವರ ಸಹಯೋಗದೊಂದಿಗೆ ವಿಶ್ವ ಮೂತ್ರಪಿಂಡ ದಿನದ ಅಂಗವಾಗಿ ಬುಧವಾರ, ಮಾರ್ಚ್ 06, 2024ರಂದು ಮೂತ್ರಪಿಂಡ (ಕಿಡ್ನಿ) ಆರೋಗ್ಯದ ಜಾಗೃತಿ ಶಿಕ್ಷಣ ಮತ್ತು ಉಚಿತ ಕಿಡ್ನಿ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ.
ಶಿಬಿರವು ಬೆಳಿಗ್ಗೆ 10.30ರಿಂದ ಮದ್ಯಾಹ್ನ 12.30 ರ ವರೆಗೆ ಆತ್ರಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ವೈದ್ಯಕೀಯ ಅಧೀಕ್ಷಕ ಡಾ ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಮೂತ್ರಪಿಂಡದ ಕಾಯಿಲೆಯು ಭಾರತದಲ್ಲಿ ಪ್ರಮುಖ ಸಾರ್ವಜನಿಕ ಆರೋಗ್ಯ ಕಾಳಜಿಯಾಗಿದೆ. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು ಆದರೆ ವಯಸ್ಸಾದವರಲ್ಲಿ ಸಾಮಾನ್ಯವಾಗಿದೆ, ಇದು ಹಲವಾರು ಅಂಶಗಳಿಂದ ಉಂಟಾಗುತ್ತದೆ, ಅವುಗಳಲ್ಲಿ ಅತ್ಯಂತ ಸಾಮಾನ್ಯವಾದ ಕಾರಣವೆಂದರೆ ಮಧುಮೇಹ. ಈ ಕೆಳಗಿನವುಗಳು ಕಿಡ್ನಿ ಕಾಯಿಲೆಯ ಚಿಹ್ನೆಗಳು: ವಾಕರಿಕೆ ಅಥವಾ ವಾಂತಿ, ಸ್ನಾಯು ಸೆಳೆತ, ಹಸಿವಿನ ಕೊರತೆ, ಪಾದಗಳು ಮತ್ತು ಕಣಕಾಲುಗಳಲ್ಲಿ ಊತ, ಚರ್ಮದಲ್ಲಿ ತುರಿಕೆ , ಉಸಿರಾಟದ ತೊಂದರೆ, ನಿದ್ರಾಹೀನತೆ, ಹೆಚ್ಚು / ಕಡಿಮೆ ಮೂತ್ರ ವಿಸರ್ಜನೆ, ತೂಕ ನಷ್ಟ, ಆಯಾಸ, ಮೂತ್ರದಲ್ಲಿ ರಕ್ತ ಇತ್ಯಾದಿ. ಆರಂಭದಲ್ಲಿ ಪತ್ತೆಹಚ್ಚಿ ಚಿಕಿತ್ಸೆ ಪಡೆಯದಿದ್ದರೆ ಕೊನೆಯ ಹಂತದ ಮೂತ್ರಪಿಂಡ ಕಾಯಿಲೆಗೆ ತುತ್ತಾಗಿ, ಕುಟುಂಬಕ್ಕೆ ದೊಡ್ಡ ಆರ್ಥಿಕ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಮೂತ್ರಪಿಂಡ ವಿಭಾಗದ ಮುಖ್ಯಸ್ಥರಾದ ಡಾ ದರ್ಶನ್ ರಂಗಸ್ವಾಮಿ ಹೇಳಿದ್ದಾರೆ.