ಕಾಪು:ಮಾರ್ಚ್ 04 : ನಿಂತಿದ್ದ ಪಿಕಪ್ ಟೆಂಪೋಗೆ ಸ್ಕೂಟಿ ಢಿಕ್ಕಿ ಹೊಡೆದು ಸವಾರ ಮೃತಪಟ್ಟು, ತಾಯಿ ಗಂಭೀರ ಗಾಯಗೊಂಡ ಘಟನೆ ಉದ್ಯಾವರ ಹಲೀಮಾ ಸಾಬ್ಜುಆಡಿಟೋರಿಯಂ ಸಮೀಪ ರವಿವಾರ ಬೆಳಿಗ್ಗೆ ಸಂಭವಿಸಿದೆ.
ಉಚ್ಚಿಲ ಪೊಲ್ಯ ನಿವಾಸಿ, ಪ್ರಸ್ತುತ ಹೆಜಮಾಡಿಯಲ್ಲಿ ವಾಸವಿರುವ ಅಝೀಜ್ ಅವರ ಪುತ್ರ ಮುಫ್ರೀನ್ (18 ) ಮೃತಪಟ್ಟಿದ್ದು, ಆತನ ತಾಯಿ ಹಾಜಿರಾ ಭಾನು ಗಂಭೀರ ಗಾಯ ಗೊಂಡಿದ್ದಾರೆ.
ಮುಫ್ರೀನ್ ರವಿವಾರ ಬೆಳಗ್ಗೆ ತನ್ನ ತಾಯಿಯನ್ನು ಹೆಜಮಾಡಿಯಿಂದ ಉಡುಪಿಯ ಆಸ್ಪತ್ರೆಗೆ ಚಿಕಿತ್ಸೆಗೆಂದು ಸ್ಕೂಟಿಯಲ್ಲಿ ಕರೆದೊಯ್ಯುತ್ತಿದ್ದಾಗ ಉದ್ಯಾವರದಲ್ಲಿ ನಿಂತಿದ್ದ ಪಿಕಪ್‌ಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದ ವೇಳೆ ಗಂಭೀರ ಗಾಯಗೊಂಡಿದ್ದ ಮುಫ್ರೀನ್ ಅವರನ್ನು ಮಣಿಪಾಲದ ಕೆಎಂಸಿಗೆ ಕೊಂಡೊಯ್ಯಲಾಯಿತಾದರೂ ಅಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದರು. ಅವರ ತಾಯಿ ಹಾಜಿರಾ ಭಾನು ಅವರೂ ಗಂಭೀರ ಗಾಯಗೊಂಡಿದ್ದು, ಅವರನ್ನು ಹೈಟೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಪು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.