ಮಣಿಪಾಲ್ :ಫೆಬ್ರವರಿ 28– ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ]ನ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ (ಎಂಸಿಎಚ್‌ಪಿ] ಸಂಸ್ಥೆಯು ಮಣಿಪಾಲ್ ಅನಸ್ತೇಶಿಯ ಟೆಕ್ನಾಲಜಿ [ಎಂಎಟಿಸಿಒಎನ್-2024)ಯ ಕುರಿತ ದ್ವಿತೀಯ ರಾಷ್ಟ್ರೀಯ ಸಮಾವೇಶವನ್ನು 2024, ಫೆಬ್ರವರಿ 22 ಮತ್ತು 23 ರಂದು ಎಂಸಿಪಿಎಚ್, ಮಾಹೆಯ ಶಾರದಾ ಹಾಲ್‌ನಲ್ಲಿ ಆಯೋಜಿಸಿದ್ದು ಸುಮಾರು 250 ಮಂದಿ ತಜ್ಞರು ಭಾಗವಹಿಸಿದ್ದರು. ‘ಅರಿವಳಿಕೆ ಬಳಕೆಯ ಕಲೆಯಲ್ಲಿ ಆವಶ್ಯಕವಾದ ಆದರೆ, ಮರೆಯಲ್ಲಿರುವ ಕ್ಷೇತ್ರಗಳಲ್ಲಿ ನೈಪುಣ್ಯ ಸಾಧಿಸುವುದು’ ಎಂಬ ವಿಷಯಕೇಂದ್ರಿತವಾಗಿ ಸಮಾವೇಶ ಆಯೋಜನೆಗೊಂಡಿತ್ತು.
ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್‌ನ ಡೀನ್ ಆಗಿರುವ ಡಾ. ಜಿ. ಅರುಣ್ ಮಯ್ಯ ಅವರು ಸ್ವಾಗತ ಮತ್ತು ಪ್ರಸ್ತಾವನೆ ಮಾಡುತ್ತ, ‘ಆರೋಗ್ಯ ಪಾಲನೆಯ ಕ್ಷೇತ್ರದಲ್ಲಿ ಅರಿವಳಿಕೆ ತಂತ್ರಜ್ಞಾನದ ಮಹತ್ತ್ವವನ್ನು ವಿವರಿಸಿದರು. ಮೊದಲ ದಿನ ಮಾಹೆಯ ಆರೋಗ್ಯ ವಿಜ್ಞಾನ ವಿಭಾಗದ ಸಹ-ಉಪಕುಲತಿಗಳಾದ ಡಾ. ಶರತ್ ಕೆ. ರಾವ್ ಅವರು ಸಮಾವೇಶವನ್ನು ಉದ್ಘಾಟಿಸಿದರು. ಡೆಲ್ಟಾ ಹೆಲ್ತ್ ಕೇರ್ ವಿಭಾಗದ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಸಿ. ಆರ್. ಭರತ್ ನಾರಾಯಣನ್ ಮುಖ್ಯ ಅತಿಥಿಗಳಾಗಿದ್ದರು. ಡಾ. ಪ್ರಿಯಾಂಕಾ ಜಿ. ಕಿಣಿ ಮತ್ತು ಅಂಜು ಎಸ್. ಅವರು ಕಾರ್ಯಕ್ರಮವನ್ನು ಸಂಯೋಜಿಸಿದರು.
ಪ್ರಸ್ತುತ ಕಾರ್ಯಕ್ರಮವು ಪ್ರಾಯೋಗಿಕ ಕಲಾಪಗಳನ್ನು ಹೊಂದಿದ್ದು ಭಾಗಿಗಳು ಅರಿವಳಿಕೆ ಬಳಕೆಯ ಕಲೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಕರಕೌಶಲವನ್ನು ಬಳಸುವ ಜ್ಞಾನವನ್ನು ವಿನಿಮಯ ಮಾಡಿಕೊಂಡರು. ಮಣಿಪಾಲ್ ಅನಸ್ತೇಶಿಯ ಟೆಕ್ನಾಲಜಿ [ಎಂಎಟಿಸಿಒಎನ್-2024) ಸಮಾವೇಶವು ಮುಖ್ಯವಾಗಿ ಅನಸ್ತೇಶಿಯಾ ತಂತ್ರಜ್ಞಾನದ ಸುಧಾರಿತ ಸಿದ್ಧಾಂತ ಮತ್ತು ಪ್ರಯೋಗಗಳ ಬೆಳವಣಿಗೆಯ ಮಹತ್ತ್ವದ ಅಂಶಗಳನ್ನು ಒಳಗೊಂಡಿತ್ತು. ಈ ಸಮಾವೇಶವನ್ನು ಆಯೋಜಿಸುವ ಮೂಲಕ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ [ಎಂಸಿಎಚ್‌ಪಿ] ಸಂಸ್ಥೆಯು ಆರೋಗ್ಯ ವಿಜ್ಞಾನದ ಕ್ಷೇತ್ರದ ಚಿಂತನೆ, ಸಂಶೋಧನೆ, ಪ್ರಯೋಗ- ಕ್ಷೇತ್ರಗಳಿಗೆ ಬೆಳವಣಿಗೆಗೆ ನಿರಂತರ ಕೊಡುಗೆ ನೀಡುವ ತನ್ನ ಬದ್ಧತೆಯನ್ನು ಪ್ರಕಟಿಸಿದಂತಾಗಿದೆ.