ಸುರತ್ಕಲ್: ಫೆಬ್ರವರಿ 25:ಶಾಲೆಯಿಂದ ಮನೆಗೆ ವಾಪಾಸಾಗಿದ್ದ ವಿದ್ಯಾರ್ಥಿಯೊಬ್ಬ ತನ್ನದೇ ಸ್ಕೂಲ್ ಬಸ್ ಅಡಿಗೆ ಬಿದ್ದು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳೂರು ಹೊರವಲಯದ ಕುಳಾಯಿಯಲ್ಲಿ ನಡೆದಿದೆ.
ನಿರ್ಲಕ್ಷ್ಯ ಹಾಗೂ ನಿರ್ವಾಹಕ ಇಲ್ಲದೆ ಬಸ್ ಚಲಾಯಿಸಿದಕ್ಕೆ ಡ್ರೈವರ್ ವಿರುದ್ಧ ಕೇಸು ದಾಖಲಿಸಲಾಗಿದೆ. ಸುರತ್ಕಲ್‌ನ ಆಂಗ್ಲ ಮಾದ್ಯಮ ಶಾಲೆಯಲ್ಲಿ ಕಲಿಯತ್ತಿದ್ದ ವಿದ್ಯಾರ್ಥಿ ಮನೆಗೆ ವಾಪಾಸಾದಾಗ ಈ ಅಪಘಾತ ಸಂಭವಿಸಿದೆ. ಖಾಸಗಿ ಬಸ್ ವ್ಯವಸ್ಥೆಯಲ್ಲಿ ಶಾಲೆಗೆ ಹೋಗಿ ಬರುತ್ತಿದ್ದ ವಿದ್ಯಾರ್ಥಿ ಎಂದಿನಂತೆ ಶುಕ್ರವಾರ ಮನೆಯ ಬಳಿ ಬಸ್ ಇಳಿದಿದ್ದಾನೆ. ಆದರೆ ಬಸ್ ಹಿಂಬಾಗದಿಂದ ರಸ್ತೆ ದಾಟುವ ಬದಲಾಗಿ ಬಸ್ ಮುಂಭಾಗದಿಂದ ರಸ್ತೆ ಕ್ರಾಸ್ ಮಾಡಿದ್ದಾನೆ. ಈ ವೇಳೆ ಬಸ್ ಚಾಲಕನಿಗೆ ಬಾಲಕ ರಸ್ತೆ ದಾಟುತ್ತಿರುವುದು ಗಮನಕ್ಕೆ ಬಾರದೆ ಬಸ್ ಚಲಾಯಿಸಿದ್ದಾನೆ.
ಈ ವೇಳೆ ಬಸ್ ಅಡಿಗೆ ಬಿದ್ದ ಸಹಪಾಠಿಯನ್ನು ಗಮನಿಸಿದ ಇನ್ನೊರ್ವ ವಿದ್ಯಾರ್ಥಿ ತಕ್ಷಣ ಡ್ರೈವರ್ ಗಮನಕ್ಕೆ ತಂದು ಬಸ್ ನಿಲ್ಲಿಸಿದ್ದಾನೆ. ಬಸ್ ನಡುವೆ ಬಿದ್ದ ವಿದ್ಯಾರ್ಥಿ ಬಸ್ ಅಡಿಗೆ ಬಿದ್ದಿದ್ದರೂ ಚಕ್ರಗಳಿಗೆ ಸಿಲುಕದ ಕಾರಣ ಪ್ರಾಣ ಉಳಿಸಿಕೊಂಡಿದ್ದಾನೆ. ಬಸ್ ನಲ್ಲಿ ನಿರ್ವಾಹಕ ಇಲ್ಲದೇ ಇದ್ದಿದ್ದು ಹಾಗೂ ಬಸ್ ಚಾಲಕನ ನಿರ್ಲಕ್ಷ್ಯ ಚಾಲನೆ ವಿಚಾರವಾಗಿ ಸುರತ್ಕಲ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿದ್ಯಾರ್ಥಿ ಬಸ್ ಅಡಿಗೆ ಬೀಳುವ ದೃಶ್ಯ ಸ್ಥಳೀಯ ಮನೆಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.