ಮಂಗಳೂರು,:ಫೆಬ್ರವರಿ 24 : ದುಬೈನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಂಗಳೂರು ಮೂಲದ ಯುವತಿ ಮೃತಪಟ್ಟಿದ್ದಾಳೆ. ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ , ಕೋಟೆಕಾರಿನ ಬೀರಿಯ ಕೆಂಪುಮಣ್ಣು ನಿವಾಸಿ ರಾಜೀವಿ ಅವರ ಏಕೈಕ ಪುತ್ರಿ ವಿದಿಶಾ (28) ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಂಗಳೂರು ಮೂಲದ ವಿದಿಶಾ ದುಬೈನಲ್ಲಿ ವಾಸವಿದ್ದರು. ಪ್ರತಿ ದಿನ ಕಂಪನಿಗೆ ಕ್ಯಾಬ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಆದರೆ ನಿನ್ನೆ(ಫೆಬ್ರವರಿ 22) ಕ್ಯಾಬ್ ತಪ್ಪಿದ ಕಾರಣಕ್ಕೆ ತಮ್ಮದೇ ಕಾರನ್ನು ತೆಗೆದುಕೊಂಡು ಹೋಗಿದ್ದಾರೆ. ಈ ವೇಳೆ ಕಾರಿನ ನಿಯಂತ್ರಣ ತಪ್ಪಿದ್ದು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿದ್ದ ವಿದಿಶಾ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಮಂಗಳೂರು ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರಿಗೆ ವಿದಿಶಾ ಏಕೈಕ ಪುತ್ರಿಯಾಗಿದ್ದಳು. ಪ್ರತಿಭಾನ್ವಿತರಾಗಿದ್ದ ವಿದಿಶಾ ವಿದ್ಯಾರ್ಥಿ ದಿಸೆಯಲ್ಲೇ ರೋಟರಿ ಸೇರಿದಂತೆ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು. ವಿದಿಶಾ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದ ವಿದಿಶಾ, 2019ರಲ್ಲಿ ದುಬೈ ತೆರಳಿ ಎಕ್ಸ್ಕ್ಯೂಜೆಟ್‍ನಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ದುಬೈನಲ್ಲಿ ವಾಹನ ಚಾಲನಾ ಲೈಸೆನ್ಸ್ ಪಡೆದ ಬಳಿಕ ಕಳೆದ ಆರು ತಿಂಗಳ ಹಿಂದೆ ಹೊಸ ಕಾರು ಖರೀದಿಸಿದ್ದರು. ಇತ್ತ ತಂದೆ ತಾಯಿ ವಿದಿಶಾಳ ಮದುವೆಯ ಸಿದ್ಧತೆ ನಡೆಸುತ್ತಿರುವಾಗಲೇ ಈ ದುರಂತ ನಡೆದಿದೆ..