ಉಡುಪಿ:ಫೆಬ್ರವರಿ 23: ಎರಡು ವರ್ಷಗಳ ಹಿಂದೆ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯನ್ನು ಗರ್ಭಿಣಿಯನ್ನಾಗಿಸಿ ಮಗುವಿಗೆ ಜನ್ಮ ನೀಡಲು ಕಾರಣನಾದ ಪ್ರಕರಣದ ಆರೋಪಿಗೆ 20 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಉಡುಪಿ ಹೆಚ್ಚುವರಿ ಪೋಕ್ಸೋ ನ್ಯಾಯಾಲಯ ಗುರುವಾರ ಆದೇಶ ನೀಡಿದೆ
ಬೈಂದೂರು ಹಳ್ಳಿಹೊಳೆ ನಿವಾಸಿ, ಬಸ್ ನಿರ್ವಾಹಕ ಪ್ರಶಾಂತ ಪೂಜಾರಿ (25) ಶಿಕ್ಷೆಗೆ ಗುರಿಯಾಗಿರುವಾತ. ಸಂತ್ರಸ್ತ ಬಾಲಕಿ ಶಾಲೆಗೆ ಹೋಗುವ ಸಂದರ್ಭ 5 ವರ್ಷಗಳಿಂದ ಪರಿಚಯವಿದ್ದ ಪ್ರಶಾಂತ ಪೂಜಾರಿ 2022ರ ಜುಲೈಯಲ್ಲಿ ಬಾಲಕಿಯನ್ನು ಒತ್ತಾಯಪಡಿಸಿ ತನ್ನ ಬೈಕ್‌ನಲ್ಲಿ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲಿಂದ ಬಲವಂತವಾಗಿ ಆತನ ಮನೆಗೆ ಕರೆದುಕೊಂಡು ಹೋಗಿ ಬಲವಂತದ ದೈಹಿಕ ಸಂಪರ್ಕ ನಡೆಸಿದ್ದನು.
ಬಳಿಕ ನೊಂದ ಬಾಲಕಿಗೆ ಮುಟ್ಟಿನ ಸಮಸ್ಯೆ ಉಂಟಾಗಿದ್ದು, ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಬಾಲಕಿ ಗರ್ಭಿಣಿಯಾಗಿರುವ ವಿಚಾರ ತಿಳಿದು ಬಂದಿದೆ. ಅದರಂತೆ ನೊಂದ ಬಾಲಕಿಯ ಅಜ್ಜಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ಕುಂದಾಪುರ ವೃತ್ತ ನಿರೀಕ್ಷಕ ಮಹಾಬಲೇಶ್ವರ ತನಿಖೆ ನಡೆಸಿ ಆರೋಪಿಯ ವಿರುದ್ಧ ದೋಷಾರೋಪಣೆ ಸಲ್ಲಿಸಿದ್ದರು.
20 ಸಾಕ್ಷಿಗಳ ಪೈಕಿ 13 ಸಾಕ್ಷಿಗಳ ವಿಚಾರಣೆ ನಡೆಸಲಾಗಿದ್ದು, ನೊಂದ ಬಾಲಕಿ ಅನಂತರ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈ ಬಗ್ಗೆ ಡಿಎನ್‌ಎ ತನಿಖೆ ಮಾಡಿದ್ದು, ಆರೋಪಿ ಮಗುವಿನ ತಂದೆ ಎಂಬುದಾಗಿ ವರದಿ ಬಂದಿತ್ತು. ಆರೋಪಿಯ ಮೇಲೆ ಈಗಾಗಲೇ ಮತ್ತೂಂದು ಪೋಕ್ಸೋ ಪ್ರಕರಣ ದಾಖಲಾಗಿದ್ದು, ಅದರಂತೆ ನೊಂದ ಬಾಲಕಿಯ ಸಾಕ್ಷ್ಯ, ಸಾಂದರ್ಭಿಕ ಸಾಕ್ಷಿಗಳು ಮತ್ತು ಆಯೋಜನೆಯು ಆರೋಪಿಯ ಅಪರಾಧವನ್ನು ಸಾಬೀತುಪಡಿಸಿತು.
ಈ ಎಲ್ಲ ವಿಚಾರಗಳನ್ನು ಗಮನಿಸಿದ ಹೆಚ್ಚುವರಿ ಪೋಕ್ಸೋ ನ್ಯಾಯಾಲಯದ ಜಿಲ್ಲಾ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಗೆ ನೊಂದ ಬಾಲಕಿಯನ್ನು ಬಲವಂತವಾಗಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಕರೆದುಕೊಂಡು ಹೋಗಿರುವ ಬಗ್ಗೆ 3 ವರ್ಷ ಕಠಿನ ಸಜೆ, 5 ಸಾವಿರ ರೂ.ದಂಡ ಮತ್ತು ಅತ್ಯಾಚಾರಕ್ಕೆ 10 ವರ್ಷ ಸಜೆ, 10 ಸಾವಿರ ರೂ. ದಂಡ, ಅಪ್ರಾಪೆ ಗರ್ಭಿಣಿಯಾಗಲು ಕಾರಣವಾದುದಕ್ಕೆ 20 ವರ್ಷಗಳ ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದ್ದಾರೆ
ದಂಡದ ಮೊತ್ತದಲ್ಲಿ 25 ಸಾವಿರ ರೂ.ಗಳನ್ನು ನೊಂದ ಬಾಲಕಿಗೆ ಹಾಗೂ 10 ಸಾವಿರ ರೂ.ಗಳನ್ನು ಸರಕಾರಕ್ಕೆ ಪಾವತಿಸುವಂತೆ ಹಾಗೂ ನೊಂದ ಬಾಲಕಿಗೆ ಸರಕಾರ ಪರಿಹಾರವಾಗಿ 2 ಲ.ರೂ. ನೀಡುವಂತೆ ಸರಕಾರಕ್ಕೆ ನಿರ್ದೇಶಿಸಿ ನ್ಯಾಯಾಲಯ ಆದೇಶ ನೀಡಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದ ಮಂಡಿಸಿದ್ದರು.
ಪ್ರಕರಣದ ತನಿಖೆಯನ್ನು ಮಾನ್ಯ ವೃತ್ತ ನಿರೀಕ್ಷಕರಾದ ಮಹಾಬಲೇಶ್ವರ S N ಅವರು ತನಿಖೆಯನ್ನು ಕೈಗೊಂಡು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿ ಆರೋಪಿಗೆ ಶಿಕ್ಷೆಯಾಗಲು ಕಾರಣರಾಗಿರುತ್ತಾರೆ