ಬೆಂಗಳೂರು :ಫೆಬ್ರವರಿ 23: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಉಳಿಕೆ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ (ಸ್ಥಳೀಯ) ವೃಂದದಲ್ಲಿರುವ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳ ನೇರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಾಗುತ್ತದೆ.
ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಭ್ಯರ್ಥಿಗಳು ಒಂದು ಜಿಲ್ಲೆಗೆ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿದ್ದು, ಪ್ರಾಧಿಕಾರವು ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗಬೇಕು. ಎರಡನೇ ಪಿ.ಯು.ಸಿ ಅಥವಾ ತತ್ಸಮಾನ ಪದವಿ ಪಡೆದ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ.ಒಟ್ಟು 1000 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದು, ಅಭ್ಯರ್ಥಿಯು ಎರಡನೇ ಪಿಯುಸಿ ಅಥವಾ ತತ್ಸಮಾನತೆಯ ಶೈಕ್ಷಣಿಕ ವಿದ್ಯಾರ್ಹತೆಯನ್ನು ಪಡೆದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ 21,400-42,000 ನಿಗದಿಯಾಗಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಇಲಾಖೆಯ ಅಧಿಕೃತ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಮಾರ್ಚ್ 04 ರಿಂದ ಆರಂಭವಾಗಲಿದ್ದು, ಏಪ್ರೀಲ್ 03 ರವರೆಗೆ ಅವಕಾಶವಿದೆ. ಆನ್‍ಲೈನ್ ಮೂಲಕ ಶುಲ್ಕ ಪಾವತಿ ಮಾಡಲು ಏಪ್ರೀಲ್ 06 ಕೊನೆಯ ದಿನಾಂಕವಾಗಿರುತ್ತದೆ.
ಇಲಾಖೆಯ ಅಧಿಕೃತ ವೆಬ್‍ಸೈಟ್ http://kea.kar.nic.in ನಲ್ಲಿ ತೋರಿಸುವ “Village Administrative Officer Recruitment- 2024” ಲಿಂಕ್ ಅನ್ನು ಆಯ್ಕೆ ಮಾಡಿ ಆನ್‍ಲೈನ್ ಮುಖಾಂತರ ಅರ್ಜಿಯನ್ನು ಭರ್ತಿ ಮಾಡಬಹುದು. ಪೆನ್ ಮತ್ತು ಪೇಪರ್ ಉಪಯೋಗಿಸಿ ಅರ್ಜಿಯನ್ನು ಸಲ್ಲಿಸುವ ವಿಧಾನ ಇರುವುದಿಲ್ಲ. ಅಭ್ಯರ್ಥಿಗಳ ಅರ್ಹತೆ ವಿವರ, ವಯೋಮಿತಿ, ಸ್ಪರ್ಧಾತ್ಮಕ ಪರೀಕ್ಷೆ, ಆಯ್ಕೆ ಪ್ರಕ್ರಿಯೆ ಮತ್ತು ನೇಮಕಾತಿಯ ವಿವರ ಹಾಗೂ ಪ್ರವರ್ಗವಾರು ಮತ್ತು ಜಿಲ್ಲಾವಾರು ಹುದ್ದೆಗಳ ವಿವರಗಳು ಹಾಗೂ ಇನ್ನಿತರ ಮಾಹಿತಿಗಾಗಿ ಕೆಇಎ ವೆಬ್‍ಸೈಟ್: http://kea.kar.nic.in ಗೆ ಸಂಪರ್ಕಿಸಬಹುದು. *ಸೂಚನೆ:* ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದು, ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾಗುವುದು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅರ್ಹತೆ ಪಡೆಯುವುದು ಅಭ್ಯರ್ಥಿಗಳಿಗೆ ಗ್ರಾಮ ಆಡಳಿತ ಅಧಿಕಾರಿ ನೇಮಕಾತಿಗೆ ಯಾವುದೇ ಹಕ್ಕನ್ನು ನೀಡುವುದಿಲ್ಲ. ನೇಮಕಾತಿಯು ಸರ್ಕಾರ, ಸಕ್ಷಮ ಪ್ರಾಧಿಕಾರ, ನೇಮಕಾತಿ ಪ್ರಾಧಿಕಾರವು ನಿಗದಿಪಡಿಸಬಹುದಾದ ಅರ್ಹತಾ ಮಾನದಂಡಗಳಿಗೆ ಒಳಪಟ್ಟಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.