ಮನೆ ಬಾಗಿಲಿಗೆ ಕಣ್ಣಿನ ಆರೈಕೆ ʻಆಶಾಕಿರಣʼ ಯೋಜನೆ ಜಾರಿ : 1 ಕೋಟಿಗೂ ಹೆಚ್ಚು ಜನರ ಕಣ್ಣಿನ ತಪಾಸಣೆ..!!
ಬೆಂಗಳೂರು : ಫೆಬ್ರವರಿ 22:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ’ಆಶಾಕಿರಣ’ ಯೋಜನೆ ರಾಜ್ಯಾದ್ಯಂತ ಜಾರಿಯಾಗಿದೆ. ಈಗಾಗಲೇ 2,45,587 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ಜನರಲ್ಲಿ ಕಣ್ಣಿನ ಆರೈಕೆ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಜನರ ಮನೆ ಬಾಗಿಲಿಗೆ ಕಣ್ಣಿನ ಆರೈಕೆ ಸೇವೆಯನ್ನು ತಲುಪಿಸುವ ನಿಟ್ಟಿನಲ್ಲಿ ಆಶಾಕಿರಣ ಯೋಜನೆ ಈಗಾಗಲೇ ಕಾರ್ಯೋನ್ಮುಖವಾಗಿದೆ ಎಂದು ಹೇಳಿದ್ದಾರೆ.
ಆಶಾ,ಆರೋಗ್ಯ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಣ್ಣಿನ ತಪಾಸಣೆ ನಡೆಸಲಿದ್ದು, 2,45,587 ಫಲಾನುಭವಿಗಳಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ. ಈಗಾಗಲೇ 1 ಕೋಟಿಗೂ ಅಧಿಕ ಜನರ ಕಣ್ಣಿನ ತಪಾಸಣೆ ನಡೆಸಲಾಗಿದ್ದು, 39,336 ಜನರಿಗೆ ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಂಧತ್ವ ಮುಕ್ತ ಕರ್ನಾಟಕ ನಿರ್ಮಾಣದತ್ತ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ ಎಂದು ತಿಳಿಸಿದ್ದಾರೆ.