ಬೆಂಗಳೂರು : ಫೆಬ್ರವರಿ 22: ರಾಜ್ಯದಲ್ಲಿ ಸಿಗರೇಟು ಸೇವಿಸುವ ವಯೋಮಿತಿಯನ್ನು 21ವರ್ಷಕ್ಕೆ ಹೆಚ್ಚಿಸುವ ಅಂಶವನ್ನೊಳಗೊಂಡ ಸಿಗರೇಟುಗಳ ಮತ್ತು ಇತರ ತಂಬಾಕು ಉತ್ಪನ್ನಗಳ ತಿದ್ದುಪಡಿ ವಿಧೇಯಕಕ್ಕೆ ನಿನ್ನೆ ವಿಧಾನಸಭೆ ಅಂಗೀಕಾರ ನೀಡಿತು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧೇಯಕ ಕುರಿತು ವಿವರಣೆ ನೀಡಿ, ರಾಜ್ಯಾದ್ಯಂತ ಈಗಾಗ್ಲೇ ಹುಕ್ಕಾಬಾರ್ ಗಳನ್ನು ನಿಷೇಧಿಸಲಾಗಿದೆ. ಅಲ್ಲದೆ ಈ ಮೊದಲು ಇದ್ದ 18 ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ ಮಾಡುವಂತಿಲ್ಲ ಎಂಬುದನ್ನು 21 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇವಿಸಿದರೆ ಒಂದು ಸಾವಿರ ರು. ದಂಡ ವಿಧಿಸಲಾಗುವುದು. ಹುಕ್ಕಾಬಾರ್‌ಗಳನ್ನು ನಿಷೇಧಿಸಲಾಗಿದೆ. ಈ ಬಗ್ಗೆ ಈಗಾಗಲೇ ಆರೋಗ್ಯ ಇಲಾಖೆ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಕೆಲವರು ನ್ಯಾಯಾಲಯ ಮೊರೆ ಹೋಗಿದ್ದಾರೆ. ಆದರೆ ನ್ಯಾಯಾಲಯ ಯಾವುದೇ ತಡೆ ನೀಡಿಲ್ಲ ಎಂದರು.