ಮಣಿಪಾಲ ಫೆಬ್ರವರಿ 19, 2024 – ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ [ಮಾಹೆ] ನ ಆಶ್ರಯದಲ್ಲಿ ಜರಗಿದ ದ ಅಖಿಲ ಭಾರತ ಅಂತರ್ ವಲಯ ಅಂತರ್ ವಿಶ್ವವಿದ್ಯಾನಿಲಯ ಚೆಸ್ ಛಾಂಪಿಯನ್‌ಶಿಪ್ 2024 ಪಂದ್ಯವು ಇಂದು ಮುಕ್ತಾಯಗೊಂಡಿದ್ದು ಚೆನ್ನೈನ ಎಸ್‌ಆರ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ & ಟೆಕ್ನಾಲಜಿ ತಂಡವು ಪ್ರಥಮಸ್ಥಾನ ಗಳಿಸಿ ವಿಜಯಶಾಲಿಯಾಗಿದೆ. ಎರಡನೆಯ ಸ್ಥಾನವನ್ನು ಚೆನ್ನೈಯ ಅಣ್ಣಾ ವಿಶ್ವವಿದ್ಯಾನಿಲಯ ಗೆದ್ದುಕೊಂಡಿದೆ. ಕೊಲ್ಕತಾದ ಅದ್ಮಾಸ್ ವಿಶ್ವವಿದ್ಯಾನಿಲಯವು ಮೂರನೆಯ ಸ್ಥಾನವನ್ನು ಪಡೆದುಕೊಂಡಿದೆ.
ಫೆಬ್ರವರಿ 16 ರಿಂದ 18ರ ವರೆಗೆ ಮೂರು ದಿನಗಳ ಕಾಲ ಜರಗಿದ ಈ ಚೆಸ್ ಛಾಂಪಿಯನ್‌ಶಿಪ್‌ನಲ್ಲಿ ಭಾರತದಾದ್ಯಂತದ ವಿಶ್ವವಿದ್ಯಾನಿಲಯಗಳ ಸುಮಾರು 100 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು ಮತ್ತು ಇವರಲ್ಲಿ ಆರು ಮಂದಿ ಅಂತಾರಾಷ್ಟ್ರೀಯ ಮಾಸ್ಟರ್‌ಗಳು ಮತ್ತು ನಾಲ್ಕು ಮಂದಿ ಗ್ರ್ಯಾಂಡ್‌ಮಾಸ್ಟರ್‌ಗಳಿದ್ದರು. ಈ ಒಟ್ಟೂ ಚೆಸ್‌ಸ್ಪರ್ಧೆಯು ಚದುರಂಗದ ಆಟಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳಲ್ಲಿರುವ ಆಳವಾದ ಬೌದ್ಧಿಕ ಜ್ಞಾನ ಮತ್ತು ವ್ಯೂಹಾತ್ಮಟ ತಂತ್ರಗಾರಿಕೆಯ ಕೌಶಲವನ್ನು ಸಂಕೀರ್ಣತೆಯನ್ನು ಅನಾವರಣಗೊಳಿಸಿತು. ಚೆಸ್ ಆಟದ ರಾಷ್ಟ್ರೀಯ ಮಟ್ಟದ ಸ್ಫರ್ಧೆಗೆ ಆಶ್ರಯ ನೀಡಿ ಸಮರ್ಥವಾಗಿ ಆಯೋಜಿಸಿದ ಮಾಹೆಯ ಆತಿಥ್ಯವನ್ನು ಕ್ರೀಡಾಳುಗಳು ಶ್ಲಾಘಿಸಿದರು.
ಈ ಚಾಂಪಿಯನ್‌ಶಿಪ್ ವಿವಿಧ ವಿಶ್ವವಿದ್ಯಾನಿಲಯಗಳ ಯುವ ಮನಸ್ಸುಗಳಿಗೆ ಬೌದ್ಧಿಕ ಸ್ಪರ್ಧೆಯಲ್ಲಿ ತೊಡಗಿಸಿಕೊಳ್ಳಲು ವೇದಿಕೆಯಾಗಿ ಕಾರ್ಯನಿರ್ವಹಿಸಿತು, ಚೆಸ್ ಆಟದ ಮೂಲಕ ಅವರ ಶೈಕ್ಷಣಿಕ ಮತ್ತು ಜೀವನ ಕೌಶಲ್ಯವನ್ನು ಹೆಚ್ಚಿಸಿತು. ಎಸ್ ಆರ್ ಎಂ ಚೆನ್ನೈ, ಅಣ್ಣಾ ವಿಶ್ವವಿದ್ಯಾನಿಲಯ ಚೆನ್ನೈ, ಮತ್ತು ಅದ್ಮಾಸ್ ವಿಶ್ವವಿದ್ಯಾನಿಲಯದಿಂದ ಭಾಗವಹಿಸುವವರ ಸಾಧನೆಗಳು ಈ ಸಂಸ್ಥೆಗಳಲ್ಲಿ ಉನ್ನತ ಮಟ್ಟದ ಚೆಸ್ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಎತ್ತಿ ತೋರಿಸುತ್ತವೆ.
ಸ್ಪರ್ಧೆಯ ಸಮಾರೋಪದಲ್ಲಿ ಸ್ಪರ್ಧಾ ಆಯೋಜನ ಸಮಿತಿಯು ಸಹಭಾಗಿತ್ವವನ್ನು ನೀಡಿದ ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘಟನೆಯ ಜೊತೆಗೆ ಭಾಗಿಗಳಿಗೆ, ಪ್ರೋತ್ಸಾಹಕರಿಗೆ, ವೀಕ್ಷಕರಿಗೆ ಕೃತಜ್ಞತೆಗಳನ್ನು ಸಮರ್ಪಿಸಿತು. ಶೈಕ್ಷಣಿಕ ಮಟ್ಟದ ಕ್ರೀಡೆಯಾಗಿರುವ ಚೆಸ್‌ನ ಮುಂದಿನ ಅಖಿಲ ಭಾರತ ಅಂತರ್ ವಲಯ ಅಂತರ್ ವಿಶ್ವವಿದ್ಯಾನಿಲಯ ಛಾಂಪಿಯನ್‌ಶಿಪ್‌ನ ಆಯೋಜನೆಯ ಬಗ್ಗೆಯೂ ಪೂರ್ವಭಾವಿ ಪ್ರಸ್ತಾವನೆಯನ್ನು ಇದೇ ಸಂದರ್ಭದಲ್ಲಿ ಮುಂದಿಡಲಾಯಿತು.