ಮಂಗಳೂರು : ಫೆಬ್ರವರಿ 19:ಹಿರಿಯ ಸಾಹಿತಿ, ಕಾದಂಬರಿಕಾರ, ಭಾಷಾತಜ್ಞ, ಪ್ರಾಧ್ಯಾಪಕ ಕೆ.ಟಿ.ಗಟ್ಟಿ (ಕೂಡ್ಲು ತಿಮ್ಮಪ್ಪ ಗಟ್ಟಿ) ಅವರು ಸೋಮವಾರ ನಿಧನರಾಗಿದ್ದಾರೆ. ಮೂಲತಃ ಕಾಸರಗೋಡು ಸಮೀಪದ ಕೂಡ್ಲೂವಿನಲ್ಲಿ ಜನಿಸಿದ ಕೆ.ಟಿ.ಗಟ್ಟಿ ಅವರು ಮಂಗಳೂರಿನಲ್ಲಿ ನೆಲೆಸಿದ್ದರು.
ಹದಿನೇಳರ ಹರೆಯದಲ್ಲಿ ಶಿಕ್ಷಕರಾಗಿ ಕೆಲಸಕ್ಕೆ ಸೇರಿದ ಇವರು ಇಂಥಿಯೋಪಿಯಾದಲ್ಲಿ ಒಂಬತ್ತು ವರ್ಷ ಸೇರಿದಂತೆ ಒಟ್ಟು 25 ವರ್ಷ ಇಂಗ್ಲಿಷ್ ಪ್ರಾಧ್ಯಾಪಕರಾಗಿ ದುಡಿದಿದ್ದರು. ಕಲಿಕೆಯಲ್ಲಿ ನಿರಂತರ ಆಸಕ್ತಿ ಹೊಂದಿದ್ದ ಕೆ.ಟಿ.ಗಟ್ಟಿ ಅವರು ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಗಳಿಸಿದ್ದರು.
ಶಬ್ದಗಳು (1976), ಸೌಮ್ಯ (1978), ಮನೆ, ರಾಮಯಜ್ಞ, ನಿರಂತರ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇ ವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂ ಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ ಮುಂತಾದ ಕಾದಂಬರಿಗಳನ್ನು ಬರೆದು ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆಯನ್ನು ನೀಡಿದ್ದರು.
ಉಡುಪಿಯ ಟಿ.ಎಂ.ಪೈ. ಮಹಾವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದರು. ಭಾರತ ಸರಕಾರದಿಂದ ಪ್ರಾಧ್ಯಾಪಕರಾಗಿ ಇಥಿಯೋಪಿಯಕ್ಕೆ ಪ್ರಯಾಣ ಬೆಳೆಸಿದ್ದರು. ಕಲಿಕೆಯಲ್ಲಿ ನಿರಂತರ ಆಸಕ್ತಿ ಹೊಂದಿದ ಇವರು ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಗಳಿಸಿದ್ದರು. ಇಥಿಯೋಪಿಯದಿಂದ ಹಿಂತಿರುಗಿದ ನಂತರ ಅವರು ಉಜಿರೆಯಲ್ಲಿ ವಾಸವಾಗಿ ಕೃಷಿಯಲ್ಲಿ ತೊಡಗಿದ್ದರು.
ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಕೆ.ಟಿ.ಗಟ್ಟಿ ಅವರು, ಪತ್ರಿಕಾ ಕಾದಂಬರಿಗಳ ಮೂಲಕ ಹೆಸರುವಾಸಿಯಾಗಿದ್ದರು